ಆಲಪ್ಪುಳ (ಕೇರಳ): ಕೇರಳದಲ್ಲಿ ಹಕ್ಕಿಜ್ವರ ಹಾವಳಿ ಮತ್ತೆ ಶುರುವಾಗಿದೆ. ಇಲ್ಲಿನ ಆಲಪ್ಪುಳ ಜಿಲ್ಲೆಯ ತಕಜಿ ಎಂಬಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಬಾತುಕೋಳಿಗಳು, ಕೋಳಿಗಳು ಮತ್ತು ಇತರ ಪಕ್ಷಿಗಳನ್ನು ಹರಣ ಮಾಡಲು ಅಧಿಕಾರಿಗಳು ಆದೇಶಿಸಿದ್ದಾರೆ.
ವೈರಸ್ ಹರಡುವುದನ್ನು ತಡೆಗಟ್ಟಲು ತಕಜಿ ಗ್ರಾಮ ಪಂಚಾಯತ್‌ನ ವಾರ್ಡ್ ನಂ 10 ರ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಾ ಕೋಳಿಗಳು, ಬಾತುಕೋಳಿಗಳು ಮತ್ತು ಇತರ ಸಾಕು ಪಕ್ಷಿಗಳನ್ನು ಕೊಲ್ಲಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಹಕ್ಕಿಜ್ವರ ಕಾಣಿಸಿಕೊಂಡ ಪರಿಣಾಮ ಚಂಪಕುಳಂ, ನೆಡುಮುಡಿ, ಮುಟ್ಟಾರ್, ವಿಯಾಪುರಂ, ಕರುವತ್ತ, ತ್ರಿಕ್ಕುನ್ನಪುಳ, ತಕಝಿ, ಪುರಕ್ಕಾಡ್, ಅಂಬಲಪುಳ ದಕ್ಷಿಣ, ಅಂಬಲಪುಳ ಉತ್ತರ, ಎಡತ್ವ ಪಂಚಾಯತ್‌ಗಳು ಮತ್ತು ಹರಿಪ್ಪಾಡ್ ಪುರಸಭೆ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ವಾಹನ ಮತ್ತು ಜನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು 373 ಮಂದಿಗೆ ಕೋವಿಡ್ ದೃಢ; ನಾಲ್ವರು ಸೋಂಕಿತರು ಸಾವು
ತಕಜಿಯಲ್ಲಿ ಪಕ್ಷಿಗಳನ್ನು ಕೊಂದು ನಾಶಪಡಿಸಲು ಪಶುಸಂಗೋಪನಾ ಇಲಾಖೆಯಿಂದ ಕ್ಷಿಪ್ರ ತಂಡಗಳನ್ನು ರಚಿಸಲಾಗಿದೆ. ಬಾತುಕೋಳಿ, ಕೋಳಿ ಮೊಟ್ಟೆ, ಮಾಂಸ ಮತ್ತು ಗೊಬ್ಬರಗಳ ಬಳಕೆ ಮತ್ತು ಮಾರಾಟವನ್ನು ಸಹ ನಿಷೇಧಿಸಿ ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ವಲಸೆ ಹಕ್ಕಿಗಳಿಗೆ ರೋಗ ತಗುಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿಗಾ ವಹಿಸಲು ಮತ್ತು ಪರಿಶೀಲಿಸಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.