ನವದೆಹಲಿ: ಲಿಖೀಂಪುರ ಖೇರಿ ಪ್ರಕರಣ ಸಂಬಂಧ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಚುನಾವಣಾ ಸುಧಾರಣೆಗಳ 'ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ, 2021' ಅನ್ನು ಲೋಕಸಭೆಯಲ್ಲಿಂದು ಅಂಗೀಕರಿಸಲಾಗಿದೆ.
ಕಾನೂನು ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಿದರು. ಸಂಕ್ಷಿಪ್ತ ಚರ್ಚೆಯ ನಂತರ ಧ್ವನಿ ಮತದಿಂದ ಅಂಗೀಕರಿಸಲಾಯಿತು. ಈ ವೇಳೆ, ಕೆಲ ವಿರೋಧ ಪಕ್ಷದ ಸದಸ್ಯರು ಇದನ್ನು ಸಂಸದೀಯ ಸಮಿತಿಗೆ ಉಲ್ಲೇಖಿಸಬೇಕೆಂದು ಒತ್ತಾಯಿಸಿದರು.
ಆದರೆ, ಈ ಬೇಡಿಕೆಯನ್ನು ಸಚಿವ ಕಿರಣ್ ರಿಜಿಜು ತಿರಸ್ಕರಿಸಿದರು. ಮಸೂದೆಯ ಭಾಗವಾಗಿರುವ ವಿವಿಧ ಪ್ರಸ್ತಾವನೆಗಳನ್ನು ಈಗಾಗಲೇ ಕಾನೂನು ಮತ್ತು ಸಿಬ್ಬಂದಿಗಳ ಸ್ಥಾಯಿ ಸಮಿತಿಯು ಸೂಚಿಸಿರುವ ಜೊತೆಗೆ ಶಿಫಾರಸು ಮಾಡಿದೆ ಎಂದು ಹೇಳಿದರು.
ಬಳಿಕ ವಿಪಕ್ಷಗಳ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಅನುದಾನಕ್ಕೆ ಪೂರಕ ಬೇಡಿಕೆಗಳನ್ನು ಸದನ ಅಂಗೀಕರಿಸಿತು.
ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜನರ ಹೆಸರಿನ ದೃಢೀಕರಣಕ್ಕಾಗಿ ಮತ್ತು ಹೆಚ್ಚಿನ ಮತ ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಮತದಾರರನ್ನು ಗುರುತಿಸಲೂ ಚುನಾವಣಾ ನೋಂದಣಿ ಅಧಿಕಾರಿಗಳು ಆಧಾರ್ ಸಂಖ್ಯೆ ಪಡೆಯಲಾಗುತ್ತದೆ.
ಆಧಾರ್ ಸಂಖ್ಯೆ ಒದಗಿಸಲಾಗದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ. ಅನಿವಾರ್ಯ ಕಾರಣಗಳಿಂದ ಆಧಾರ್ ಒದಗಿಸಲಾಗದವರು ಇತರ ದಾಖಲೆಗಳನ್ನು ನೀಡಬಹುದು ಎಂದು ಮಸೂದೆ ಸ್ಪಷ್ಟಪಡಿಸಿದೆ.
ಈ ಮಸೂದೆ ಮಂಡಿಸುವುದಕ್ಕೆ ಮೊದಲಾಗಿ ಜನಪ್ರತಿನಿಧಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗುವುದು. ಇದುವರಿಗೆ ಜನವರಿ 1 ದಿನಾಂಕವನ್ನು ಮಾತ್ರ ಪರಿಗಣಿಸಿ ಆ ವರ್ಷದ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿತ್ತು. ಅರ್ಜಿಯಲ್ಲಿ ‘ಪತ್ನಿ‘ ಎಂಬ ಪದದ ಬದಲಿಗೆ ‘ಸಂಗಾತಿ’ ಎಂಬ ಪದ ಸೇರಿಸಲು ಸಹ ನಿರ್ಧರಿಸಲಾಗಿದೆ.
ಇದನ್ನೂ ಓದಿ: ರಾಜ್ಯಸಭೆಯ 12 ಸದಸ್ಯರ ಅಮಾನತು ಪ್ರಕರಣ: 5 ಪ್ರತಿಪಕ್ಷಗಳ ನಾಯಕರ ಸಭೆ ಕರೆದ ಕೇಂದ್ರ