ನವದೆಹಲಿ: ಬಿಲ್ಕಿಸ್ ಬಾನೊ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ ವಿನಾಯಿತಿ ಪ್ರಶ್ನಿಸಿ ಮಾಜಿ ಸಂಸದೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಪ್ರೊ. ರೂಪ್ ರೇಖಾ ವರ್ಮಾ ಸಲ್ಲಿಸಿರುವ ಜಂಟಿ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.
2002ರ ಗುಜರಾತ್ ಗಲಭೆಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದನ್ನು ಸಂತ್ರಸ್ತೆ ಬಿಲ್ಕಿಸ್ ಬಾನೊ ತೀವ್ರವಾಗಿ ಆಕ್ಷೇಪಿಸಿದ್ದರು. ಈ ಕುರಿತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಾಲಿಟ್‌ಬ್ಯುರೊ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಪ್ರೊ. ರೂಪ್ ರೇಖಾ ವರ್ಮಾ ಇತರ ಅರ್ಜಿದಾರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಅಧ್ಯಕ್ಷತೆಯಲ್ಲಿ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು 11 ಅಪರಾಧಿಗಳಿಗೆ ನೀಡಲಾದ ವಿನಾಯಿತಿ ರದ್ದು ಕೋರಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಲಿದೆ.
ಏನಿದು ಪ್ರಕರಣ: 2002 ರ ಗೋಧ್ರಾ ಹತ್ಯಾಕಾಂಡದ ನಂತರ ನಡೆದ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ 11 ಜನರು ಸಾಮೂಹಿಕ ಅತ್ಯಾಚಾರ ಮಾಡಿ, ಅವರ ಕುಟುಂಬದ 7 ಜನರನ್ನು ಆಕೆಯ ಎದುರೇ ಹತ್ಯೆ ಮಾಡಿದ್ದರು.
ಇದನ್ನೂ ಓದಿ: ಈ ನ್ಯಾಯ ಸರಿನಾ.. ಅತ್ಯಾಚಾರ ಮಾಡಿದವರ ಬಿಡುಗಡೆಗೆ ಬಿಲ್ಕಿಸ್ ಬಾನೊ ತೀವ್ರ ಆಕ್ಷೇಪ
2004ರಲ್ಲಿ ಇವರ ವಿರುದ್ಧ ಆರೋಪ ಸಾಬೀತಾಗಿ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಸನ್ನಡತೆ ಆಧಾರದ ಮೇಲೆ 20 ವರ್ಷಗಳ ಶಿಕ್ಷೆಯ ಬಳಿಕ 11 ಜನರನ್ನು ಕ್ಷಮಾದಾನ ನೀತಿಯಡಿ ಬಿಡುಗಡೆ ಮಾಡಲಾಗಿದೆ.
ಪೆಗಾಸಸ್ ಪ್ರಕರಣದ ವಿಚಾರಣೆ: ಪತ್ರಕರ್ತರು, ರಾಜಕಾರಣಿಗಳು ಮತ್ತು ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಲು ಪೆಗಾಸಸ್ ಸ್ಪೈವೇರ್ ಅನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳ ಕುರಿತ ತನಿಖೆಗೆ ಸುಪ್ರೀಂಕೋರ್ಟ್ ರಚಿಸಿದ್ದ ಸಮಿತಿಯು ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಆರ್ ವಿ ರವೀಂದ್ರನ್ ಈ ಸಮಿತಿಯ ನೇತೃತ್ವ ವಹಿಸಿದ್ದರು. ಈ ಹಿನ್ನೆಲೆ ಸಿಜೆಐ ನೇತೃತ್ವದ ಪೀಠವು ಪೆಗಾಸಸ್ ಪ್ರಕರಣದ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸಹ ಇಂದು ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಪೆಗಾಸಸ್ ಹಗರಣ : ತನಿಖಾ ವರದಿ ಸಲ್ಲಿಕೆಗೆ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್
ಪಿಎಂಎಲ್‌ಎ ತೀರ್ಪು ಪರಿಶೀಲನೆ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಎಂ ಎಂ ಖಾನ್ವಿಲ್ಕರ್ ನೇತೃತ್ವದ ಪೀಠದ ತೀರ್ಪನ್ನು ಮರು ಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ.