ನವದೆಹಲಿ: ಗುಜರಾತ್ನಲ್ಲಿ 2002 ರಲ್ಲಿ ನಡೆದ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾಗಿರುವ ಅಪರಾಧಿಗಳ ಪೈಕಿ ಮೂವರು ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಸಮಯ ವಿಸ್ತರಣೆ ಕೋರಿ ಸುಪ್ರೀಂಕೋರ್ಟ್ಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಗೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, 2 ವಾರಗಳ ಒಳಗೆ ಎಲ್ಲ ಅಪರಾಧಿಗಳನ್ನು ಮತ್ತೆ ಜೈಲು ಶಿಕ್ಷೆಗೆ ಒಳಪಡಿಸಬೇಕು ಎಂದು ಆದೇಶಿಸಿತ್ತು. ಇದರ ಬೆನ್ನಲ್ಲೇ ಅಪರಾಧಿಗಳು ನಾನಾ ಕಾರಣ ನೀಡಿ ಶರಣಾಗತಿಗೆ ಕಾಲಾವಕಾಶ ಯಾಚಿಸಿದ್ದಾರೆ.
ಮೂವರು ಅಪರಾಧಿಗಳ ಪರವಾಗಿ ಹಿರಿಯ ವಕೀಲ ವಿ.ಚಿತಾಂಬರೇಶ್ ಅವರು, ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ನೇತೃತ್ವದ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದರು. ಅಪರಾಧಿಗಳು ಶರಣಾಗಲು ಜನವರಿ 21 ಕೊನೆ ದಿನವಾಗಿದೆ. ವೃದ್ಧ, ತಂದೆ, ತಾಯಿ, ಪತ್ನಿ, ಮಕ್ಕಳು ಅಪರಾಧಿಗಳ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಶರಣಾಗತಿಯಾಗಲು ಇನ್ನಷ್ಟು ಸಮಯ ನೀಡಬೇಕು ಎಂದು ಕೋರಿದರು.
ಕಾರಣವೇನು?: ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಗುಜರಾತ್ ಸರ್ಕಾರದಿಂದ ಕ್ಷಮಾಪಣೆ ಪಡೆದಿರುವ 11 ಅಪರಾಧಿಗಳ ಪೈಕಿ ಮೂವರಾದ ಗೋವಿಂದಭಾಯಿ ನಾಯ್, ಮಿತೇಶ್ ಚಿಮನ್‌ಲಾಲ್ ಭಟ್ ಮತ್ತು ರಮೇಶ್ ರೂಪಾಭಾಯ್ ಚಂದನಾ ಅವರು ಸಮಯ ಕೋರಿ ಅರ್ಜಿ ಸಲ್ಲಿಸಿದವರು. ಪ್ರಕರಣದಲ್ಲಿ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 14 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ 2022 ರ ಆಗಸ್ಟ್ನಲ್ಲಿ ಬಿಡುಗಡೆ ಹೊಂದಿದ್ದರು.
ಇದೀಗ ಸುಪ್ರೀಂಕೋರ್ಟ್, ಮತ್ತೆ ಅವರನ್ನು ಜೈಲಿಗೆ ಹಾಕಲು ಸೂಚಿಸಿದ್ದರಿಂದ, ಅಪರಾಧಿ ಗೋವಿಂದಭಾಯಿ ಅವರು ಆರೋಗ್ಯ ಸಮಸ್ಯೆ, ವಯಸ್ಸಾದ ಪೋಷಕರು ತಮ್ಮ ಮೇಲೆಯೇ ಅವಲಂಬಿತರಾಗಿದ್ದಾರೆ. ಅವರನ್ನು ನೋಡಿಕೊಳ್ಳುವ ಏಕೈಕ ಕಾರಣದಿಂದಾಗಿ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ವಿಸ್ತರಿಸುವಂತೆ ಕೋರಿದ್ದಾರೆ.
ಇನ್ನೊಬ್ಬ ಅಪರಾಧಿ ರಮೇಶ್ ರೂಪಾಭಾಯ್ ಚಂದನಾ ಕೂಡ ಆರೋಗ್ಯ ಸಮಸ್ಯೆಗಳು, ಬೆಳೆಗಳ ಕೊಯ್ಲು ಮತ್ತು ಮಗನ ಮದುವೆ ಉಲ್ಲೇಖಿಸಿ ಆರು ವಾರಗಳ ಕಾಲ ವಿಸ್ತರಣೆ ಕೋರಿದ್ದಾರೆ. ಮಿತೇಶ್ ಚಿಮನ್‌ಲಾಲ್ ಭಟ್, ವೃದ್ಧ ಪೋಷಕರು, ಕಣ್ಣಿನ ಶಸ್ತ್ರಚಿಕಿತ್ಸೆ, ಮತ್ತು ಬೆಳೆ ಕೊಯ್ಲು ಕಾರಣ ನೀಡಿ, ಆರು ವಾರಗಳ ಕಾಲಾವಕಾಶ ಕೋರಿದ್ದಾರೆ.
ಸುಪ್ರೀಂಕೋರ್ಟ್ ಹೇಳಿದ್ದೇನು?: ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಿದ್ದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿತ್ತು. ಅಲ್ಲದೇ, ಅಧಿಕಾರದ ದುರ್ಬಳಕೆ ಮಾಡಿಕೊಂಡು ಅಪರಾಧಿಗಳ ಪರ ನಿಂತಿದೆ. ಹೀಗಾಗಿ 11 ಅಪರಾಧಿಗಳಿಗೆ ನೀಡಿರುವ ವಿನಾಯಿತಿ ರದ್ದು ಮಾಡಲಾಗಿದೆ. 2 ವಾರದಲ್ಲಿ ಎಲ್ಲ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗತಿ ಆಗಬೇಕು ಎಂದು ಜನವರಿ 8 ರಂದು ತೀರ್ಪು ನೀಡಿತ್ತು.
2002 ರಲ್ಲಿ ನಡೆದ ಗೋಧ್ರಾ ಗಲಭೆಗಳ ಸಮಯದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ 14 ಸದಸ್ಯರನ್ನು ಕೊಲೆ ಮಾಡಲಾಗಿತ್ತು. ದಾಳಿ ವೇಳೆ ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು.
ಇದನ್ನೂ ಓದಿ: ಬಿಲ್ಕಿಸ್ ಬಾನೊ ಪ್ರಕರಣ: 11 ಅಪರಾಧಿಗಳ ಬಿಡುಗಡೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು