ಶ್ರೀನಗರ: ಬಾಂಗ್ಲಾದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ನಿವಾಸಿ ಮೃತದೇಹವನ್ನು ಶುಕ್ರವಾರ ನವದೆಹಲಿಗೆ ತರಲಾಗಿದ್ದು, ನಿನ್ನೆ ಸಂಜೆಯ ವೇಳೆಗೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕಟೂ ಬಿಜ್‌ಭೇರಾದಲ್ಲಿರುವ ಅವರ ಮನೆಗೆ ತಲುಪಿಸಲಾಗಿದೆ.
ಮೆಡಿಕಲ್ ವಿದ್ಯಾರ್ಥಿನಿ, ಕಾಟೂ ಬಿಜಭೇರಾದ ಮಂಜೂರ್ ಅಹ್ಮದ್ ಅವರ ಪುತ್ರಿ ಖುಷ್ಬೂ ಮಂಜೂರ್ ಅವರು ಸೆಪ್ಟೆಂಬರ್ 6 ರಂದು ಸಂಜೆ ಬಾಂಗ್ಲಾದೇಶದಲ್ಲಿ ಓದುತ್ತಿದ್ದ ಖ್ವಾಜಾ ಯೂನಸ್ ಅಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ಟೆರೇಸ್‌ನಿಂದ ಬಿದ್ದು ಮೃತಪಟ್ಟಿದ್ದರು. ನಿನ್ನೆ ಬೆಳಗ್ಗೆ 10:30 ರ ಸುಮಾರಿಗೆ ಬಾಂಗ್ಲಾದೇಶದಿಂದ ಶವವನ್ನು ಹೊತ್ತ ವಿಮಾನವೊಂದು ಹೊರಟು ಶುಕ್ರವಾರ ಮಧ್ಯಾಹ್ನ 12:30 ಕ್ಕೆ ದೆಹಲಿಯ ಐಜಿಐ ವಿಮಾನ ನಿಲ್ದಾಣವನ್ನು ತಲುಪಿತು ಎಂದು ಅಧಿಕಾರಿಗಳು ಜಿಎನ್‌ಎಸ್‌ಗೆ ತಿಳಿಸಿದ್ದಾರೆ.
ಮೃತದೇಹವು ನಿನ್ನೆ ಸಂಜೆ ಶ್ರೀನಗರದ ಶೇಖ್ ಉಲ್ ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತ್ತು. ದೇಹವನ್ನು ಕುಟುಂಬಸ್ಥರು ಸ್ವೀಕರಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ವಿಮಾನ ನಿಲ್ದಾಣದಲ್ಲಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹ ತಲುಪಿದ ಬಳಿಕ ಕುಟುಂಬಸ್ಥರು ಮತ್ತು ಸಂಬಂಧಿಕರ ರೋದನೆ ಮುಗಿಲು ಮುಟ್ಟಿತ್ತು. ಬಳಿಕ ಯುವತಿಯ ಅಂತ್ಯಕ್ರಿಯೆ ವಿಧಿವಿಧಾನಗಳ ಪ್ರಕಾರ ನಡೆದಿದ್ದು, ಅಂತ್ಯಕ್ರಿಯೆ ವೇಳೆ ಸಾವಿರಾರು ಜನ ಭಾಗಿಯಾಗಿದ್ದರು.
ಕಟ್ಟಡದ ಮೇಲಿಂದ ಬಿದ್ದಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ: ಬಾಂಗ್ಲಾದೇಶದಲ್ಲಿ 3ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಜಮ್ಮು ಕಾಶ್ಮೀರದ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಕೆ ಉಸಿರು ನಿಲ್ಲಿಸಿದ್ದರು. ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಸ್ವದೇಶಕ್ಕೆ ತರಲು ನೆರವು ನೀಡಲು ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಯುವತಿ ಮೃತದೇಹವನ್ನು ಸ್ವದೇಶಕ್ಕೆ ತಲುಪಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿತ್ತು.
ಓದಿ: ಬಾಂಗ್ಲಾದೇಶದಲ್ಲಿ ಹಾಸ್ಟೆಲ್ ಕಟ್ಟಡದಿಂದ ಹಾರಿ ಕಾಶ್ಮೀರಿ ವಿದ್ಯಾರ್ಥಿನಿ ಸಾವು