ಪಾಟ್ನಾ: ಭಾರತೀಯ ವೈದ್ಯಕೀಯ ಸಂಘ ಮತ್ತು ಯೋಗ ಗುರು ಬಾಬಾ ರಾಮದೇವ್ ನಡುವಿನ ವಿವಾದ ಮತ್ತೆ ಮುಂದುವರೆದಿದೆ. ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ವಿಧಾನದ ಬಗ್ಗೆ ಟೀಕೆ ಮಾಡಿ ಮಾತನಾಡಿದ ಆಡಿಯೋ ವೈರಲ್ ಆಗುತ್ತಿದ್ದಂತೆ, ಭಾರತೀಯ ವೈದ್ಯಕೀಯ ಸಂಘವು ಪಾಟ್ನಾದ ಪತ್ರಕರ್ಣಗರ ಪೊಲೀಸ್ ಠಾಣೆಯಲ್ಲಿ ಬಾಬಾ ರಾಮದೇವ್ ವಿರುದ್ಧ ಪ್ರಕರಣ ದಾಖಲಿಸಿದೆ.
ಬಿಹಾರ ಶಾಖೆಯ ಗೌರವ ರಾಜ್ಯ ಕಾರ್ಯದರ್ಶಿ ಡಾ.ಸುನೀಲ್ ಕುಮಾರ್ ಅವರ ಹೇಳಿಕೆಯ ಮೇರೆಗೆ ಬಾಬಾ ರಾಮ್‌ದೇವ್ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿಯ ಸೆಕ್ಷನ್ 186, 187, 269, 270, 336, 420, 499, 504 ಮತ್ತು 505 ರ ಅಡಿ ಪ್ರಕರಣ ದಾಖಲಾಗಿದೆ.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ, ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ವಿಧಾನದ ಬಗ್ಗೆ ಸಾಮಾನ್ಯ ಜನರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸಿದ್ದಾರೆ ಎಂದು ಡಾ.ಸುನೀಲ್ ಕುಮಾರ್ ಆರೋಪಿಸಿದರು. ರಾಮ್‌ದೇವ್ ಬಗ್ಗೆ ಅಪನಂಬಿಕೆ ಹೆಚ್ಚಿದ್ದು, ಇದು ವೈದ್ಯರ ಭಾವನೆಗಳನ್ನು ಘಾಸಿಗೊಳಿಸಿದೆ. ಬಾಬಾ ರಾಮದೇವ್ ಅವರ ಹೇಳಿಕೆಯಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ, ಇದು ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ರಾಮದೇವ್ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಕೊರೊನಿಲ್ ಔಷಧದ ಜಾಹೀರಾತನ್ನು ನಿಲ್ಲಿಸುವಂತೆ ಆಯುಷ್ ಸಚಿವಾಲಯ ಬಾಬಾ ರಾಮ್‌ದೇವ್ ಅವರಿಗೆ ಸೂಚಿಸಿದರೂ ಅದರ ಪ್ರಚಾರ ಮಾಡಿದ್ದಾರೆ. ಈಗಲೂ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಡೀ ಬಿಹಾರ ಮತ್ತು ದೇಶವು ಕೋವಿಡ್ ಅಲೆಯೊಂದಿಗೆ ಹೋರಾಡುತ್ತಿರುವಾಗ, ಬಾಬಾ ರಾಮದೇವ್ ಅವರು ಆಧುನಿಕ ವೈದ್ಯಕೀಯ ವಿಜ್ಞಾನ, ಆಮ್ಲಜನಕ ಚಿಕಿತ್ಸೆ, ಸರ್ಕಾರ ಅನುಮೋದಿಸಿದ ಔಷಧಗಳ ಬಗ್ಗೆ ಉದ್ದೇಶಪೂರ್ವಕವಾಗಿ ತಪ್ಪು ವಿಷಯಗಳನ್ನು ಹೇಳಿದ್ದಾರೆ ಎಂದು ಸುನಿಲ್ ಆರೋಪಿಸಿದರು.