ಪಾಟ್ನಾ: ಬಿಹಾರದಲ್ಲಿ ಮದ್ಯ ನಿಷೇಧದ ನಡುವೆಯೂ ಜನರು ಅಕ್ರಮವಾಗಿ ಸೇವನೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದಕ್ಕಿಂತಲೂ ಮುಖ್ಯವಾಗಿ, ವಿಡಿಯೋದಲ್ಲಿ ಮದ್ಯ ಸೇವನೆ ಮಾಡಿರುವ ಮಂದಿಯ ಪರೀಕ್ಷೆಯನ್ನು ಖಚಿತಪಡಿಸುವಿಕೆಗೆ ನಡೆಸಿರುವ ತಂತ್ರ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಪೂರ್ವ ಚಂಪಾರಣ್ನ ಉಪವಿಭಾಗೀಯ ಆಸ್ಪತ್ರೆಯ ವೈದ್ಯರು, ಆರೋಪಿಗಳು ಮದ್ಯ ಸೇವನೆ ಮಾಡಿದ್ದಾರೋ ಇಲ್ಲವೋ ಎಂಬುದರ ಪರೀಕ್ಷೆಗೆ ಪೇಪರ್ ಕೋನ್ ಬಳಕೆ ಮಾಡಿ ಗಮನ ಸೆಳೆದಿದ್ದಾರೆ. (ಸಾಮಗ್ರಿಗಳನ್ನು ಕಟ್ಟಲು ಬಳಕೆ ಮಾಡುವ ಪೇಪರ್ ಆಕೃತಿ)
ಪ್ರಕರಣದ ವಿವರ: ಬಿಹಾರದ ಅಬಕಾರಿ ಕಾಯ್ದೆ ಅಡಿ 2016ರಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ. ಈ ನಡುವೆಯೂ ಕೆಲವು ಅಕ್ರಮ ಮದ್ಯ ಸಾಗಾಟ ಮತ್ತು ಸೇವನೆ ಪ್ರಕರಣಗಳು ಕಂಡುಬಂದಿದ್ದು, ಇವು ಜೈಲು ಶಿಕ್ಷೆಯ ಅಪರಾಧವಾಗಿದೆ.
ಈ ನಿಷೇಧದ ನಡುವೆಯೂ ಅಕ್ಟೋಬರ್ 30ರಂದು 11 ಮಂದಿ ಮದ್ಯ ಸೇವನೆ ಮಾಡಿರುವ ಪ್ರಕರಣ ದಾಖಲಾಗಿದೆ. ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಮದ್ಯ ಪತ್ತೆ ಮಾಡುವ ಉಸಿರು ವಿಶ್ಲೇಷಣೆ ಸಾಧನೆ ಅಥವಾ ರಕ್ತ ಪರೀಕ್ಷೆ ಸಾಧನೆ ಇಲ್ಲದೇ ಇರುವ ಕಾರಣ ವೈದ್ಯರು, ಪೇಪರ್ ಅನ್ನು ಕೋನ್ ರೀತಿ ಮಾಡಿ ಅದನ್ನು ಊದುವಂತೆ ತಿಳಿಸಿದ್ದಾರೆ. ಈ ಪೇಪರ್ನಲ್ಲಿನ ವಾಸನೆಯನುಸಾರ ಅವರು ಕುಡಿದಿದ್ದಾರಾ, ಇಲ್ಲವಾ ಎಂದು ಪರೀಕ್ಷೆಗೆ ಮುಂದಾಗಿದ್ದಾರೆ.
ಈ ಪರೀಕ್ಷೆ ಮಾದರಿಯಲ್ಲಿ 9 ಮಂದಿ ಮದ್ಯ ಸೇವನೆ ಮಾಡಿರುವುದು ಕಂಡುಬಂದಿದೆ. ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ರೆಕ್ಸುಲಾ ಪೊಲೀಸರುವ ಆರೋಪಿಗಳನ್ನು ಉಪ ವಿಭಾಗೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸಾಧನಗಳಿಲ್ಲದ ಕಾರಣ ಈ ಉಪಾಯ: ನಿಯಮಗಳ ಪ್ರಕಾರ, ಕಾನೂನು ಜಾರಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಅಪರಾಧಿಗಳ ರಕ್ತ ಪರೀಕ್ಷೆಯ ವರದಿಗಳಂತೆ ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸಬೇಕು. ವೈದ್ಯಕೀಯ ವರದಿಯು ರಕ್ತದಲ್ಲಿ ಕಂಡುಬರುವ ಶೇಕಡಾವಾರು ಆಲ್ಕೋಹಾಲ್ ಪ್ರಮಾಣವನ್ನು ತಿಳಿಸಬೇಕು. ಆದರೆ, ಈ ಪ್ರಕರಣದಲ್ಲಿ ಉಸಿರು ವಿಶ್ಲೇಷಕ ವರದಿ (breath-analyser) ಅಥವಾ ರಕ್ತ ಪರೀಕ್ಷೆಯ ವರದಿಗಳಾಗಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಆಸ್ಪತ್ರೆಯ ಉಪ ಸೂಪರಿಟೆಂಡೆಂಟ್ ಡಾ.ರಾಜೀವ್ ರಂಜನ್, ನಮ್ಮ ಬಳಿ ಉಸಿರು ವಿಶ್ಲೇಷಕ ಅಥವಾ ಮದ್ಯ ಪರೀಕ್ಷೆ ನಡೆಸಲು ಇತರೆ ಸೌಲಭ್ಯಗಳು ಇರಲಿಲ್ಲ. ಹೀಗಾಗಿ ವೈದ್ಯರು ಪೇಪರ್ ಕೋನ್ ಬಳಕೆ ಮಾಡಿದ್ದಾರೆ ಎಂದರು.
ರೆಕ್ಸುಲಾ ಪೊಲೀಸ್ ಠಾಣೆಯ ಎಚ್ಎಚ್ಒ ನೀರಜ್ ಕುಮಾರ್ ಪ್ರತಿಕ್ರಿಯಿಸಿ, ನಮ್ಮ ಇಲಾಖೆ ಉಸಿರು ವಿಶ್ಲೇಷಕ ಸಾಧನ ನೀಡಿತು. ಆದರೆ ಅದು ಕಾರ್ಯ ನಿರ್ವಹಣೆಯಲ್ಲಿರಲಿಲ್ಲ ಎಂದಿದ್ದಾರೆ.
ಜಿಲ್ಲಾ ಸಿವಿಲ್ ಸರ್ಜನ್ ಡಾ.ಅಂಜನಿ ಕುಮಾರ್ ಸಿಂಗ್ ಮಾಹಿತಿ ನೀಡಿ, ವೈದ್ಯರು ಮದ್ಯ ಸೇವನೆ ಮಾಡಿದ್ದಾರೆ ಎಂಬ ಆರೋಪಿಗಳನ್ನು ಪೇಪರ್ ಕೋನ್ ಪರೀಕ್ಷೆ ನಡೆಸಿರುವ ವಿಡಿಯೋ ನೋಡಿದ್ದೇವೆ. ನಾವು ಈ ಸಂಬಂಧ ತನಿಖೆಗೆ ಸಮಿತಿ ರಚಿಸಬೇಕಿದೆ. ಇದಾದ ಬಳಿಕ ವರದಿ ಅನುಸಾರ ಕ್ರಮ ನಡೆಸಬೇಕು ಎಂದರು. (ಐಎಎನ್ಎಸ್)
ಇದನ್ನೂ ಓದಿ: ಸರಯೂ ನದಿಯಲ್ಲಿ ದೋಣಿ ಮಗುಚಿ ನಾಲ್ವರ ಸಾವು: 14 ಪ್ರಯಾಣಿಕರು ನಾಪತ್ತೆ