ನವದೆಹಲಿ: ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ಮಾಡಬೇಕೆಂದು ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ 10 ರಾಜಕೀಯ ಪಕ್ಷಗಳ ನಾಯಕರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಇತರೆ ಪಕ್ಷಗಳ ಪ್ರತಿನಿಧಿಗಳು ಸಿಎಂ ನಿತೀಶ್ ಕುಮಾರ್ ಜತೆ ಕೈ ಜೋಡಿಸಿದ್ದಾರೆ.
ಬಳಿಕ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ತಾಳ್ಮೆಯಿಂದ ಮನವಿಯನ್ನು ಆಲಿಸಿದ್ದಾರೆ. ಎಲ್ಲರ ಅಭಿಪ್ರಾಯವನ್ನು ಪಡೆದಿದ್ದು, ಜಾತಿ ಆಧಾರಿತ ಗಣತಿಗೆ ತಡ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಜಾತಿ ಆಧಾರಿತ ಗಣತಿಯಿಂದಾಗಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಹಾಯವಾಗುತ್ತದೆ. ರಾಜ್ಯ ಸರ್ಕಾರ 2 ಬಾರಿ ಜಾತಿ ಗಣತಿ ಬಗ್ಗೆ ನಿರ್ಣಯಗಳನ್ನು ಕೈಗೊಂಡಿತ್ತು. ಇದರ ಬಗ್ಗೆ ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ವಿಚಾರದಲ್ಲಿ ಬಿಹಾರ ಹಾಗೂ ದೇಶದ ಜನರ ಅಭಿಪ್ರಾಯ ಒಂದೇ ಆಗಿದೆ ಎಂದರು.
ಇದನ್ನೂ ಓದಿ: 2021ರ ಜನಗಣತಿ ಜಾತಿ ಆಧಾರದ ಮೇಲೆ ನಡೆಯಬೇಕು: ಕೇಂದ್ರ ಸಚಿವ ರಾಮದಾಸ್ ಅಠಾವಳೆ
ಬಡವರಿಗೆ ನೆರವಾಗಲು ಇದೊಂದು ಐತಿಹಾಸಿಕ ಮಾರ್ಗಸೂಚಿಯಾಗಿದೆ ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ. ಒಂದು ವೇಳೆ ಪ್ರಾಣಿಗಳು ಹಾಗೂ ಮರಗಳನ್ನು ಎಣಿಕೆ ಮಾಡುವುದಾದರೆ ಜನರ ಜಾತಿ ಗಣತಿಯನ್ನೂ ಮಾಡಬೇಕು. ಸರ್ಕಾರ ಕೈಗೊಳ್ಳುವ ಜನಪರ ಯೋಜನೆಗಳಿಗೆ ಆರ್‌ಜೆಡಿಯ ಬೆಂಬಲ ಇದೆ ಎಂದು ಅವರು ಇದೇ ವೇಳೆ ತಿಳಿಸಿದರು.