ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಕಣಕ್ಕಿಳಿದಿದ್ದು, ಇದೇ ವಿಚಾರವಾಗಿ ಅವರ ಮಾವ ಡಾ. ಜಿ. ಬಾಲಚಂದ್ರನ್ ಈಟಿವಿ ಭಾರತ ಜತೆ ಮಾತನಾಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ಗೆಲುವು ಸಾಧಿಸುವ ಅವಕಾಶ ಶೇ. 90ರಷ್ಟು ಇದೆ ಎಂದಿರುವ ಡಾ. ಜಿ.ಚಾಲಚಂದ್ರನ್, 2016ರಲ್ಲಿ ವಿವಿಧ ಕಾರಣಗಳಿದಾಗಿ ಚುನಾವಣೆ ಸೋಲುವಂತಾಯಿತು. ಆದರೆ ಇದೀಗ ಬಿಡೆನ್ ಗೆಲುವು ಸ್ಪಷ್ಟ ಎಂದಿರುವ ಅವರು, ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಪತ್ರಕರ್ತ, ಶಿಕ್ಷಣ ತಜ್ಞ ಮತ್ತು ವಿದ್ವಾಂಸ ಡಾ. ಬಾಲಚಂದ್ರನ್ ಅವರು ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ದೆಹಲಿಯಲ್ಲಿ ಸಂದರ್ಶನ ನೀಡಿದ್ದು, ಟ್ರಂಪ್ ಯಾವುದೇ ಸಾರ್ವಜನಿಕ ಸೇವೆ ಮಾಡಿಲ್ಲ. ಕೋವಿಡ್ ಪರಿಸ್ಥಿತಿ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ ಎಂದಿದ್ದಾರೆ.
ಕಮಲಾ ಹ್ಯಾರಿಸ್ ಅವರ ಸಾಧನೆಗಳ ಬಗ್ಗೆ ಕುಟುಂಬಕ್ಕೆ ಹೆಮ್ಮೆ ಇದೆ. ಅವರ ಗೆಲುವಿನ ಸಂಭ್ರಮ ಆಚರಣೆ ಮಾಡಲು ಇಲ್ಲಿಯವರೆಗೆ ಯಾವುದೇ ಯೋಜನೆ ರೂಪಿಸಿಲ್ಲ. ಆದರೆ ಅವರ ಗೆಲುವಿಗಾಗಿ ಚೆನ್ನೈನ ವಿವಿಧ ಹಳ್ಳಿಗಳಲ್ಲಿ ಸ್ಥಳೀಯರು ಪ್ರಾರ್ಥನೆ ಮಾಡ್ತಿದ್ದಾರೆ ಎಂದಿದ್ದಾರೆ. ಕಮಲಾ ಹ್ಯಾರಿಸ್ ಅವರ ಸಾಮರ್ಥ್ಯ ಏನು ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ, ಸೆನೆಟರ್ ಆಗಿ ಈಗಾಗಲೇ ಸೇವೆ ಸಲ್ಲಿಸಿದ್ದಾರೆ. ನನ್ನ ತಂಗಿ ಅವಳನ್ನು ಅಮೆರಿಕಾಗೆ ಕರೆದೊಯ್ಯುತ್ತಿದ್ದ ವೇಳೆ ಕೇವಲ ಎರಡು ವರ್ಷದ ಚಿಕ್ಕ ಮಗುವಾಗಿದ್ದಳು ಎಂದು ನೆನಪಿಸಿಕೊಂಡಿದ್ದಾರೆ.