ಭೋಪಾಲ್: ಮಧ್ಯಪ್ರದೇಶದಲ್ಲಿ 22 ವರ್ಷದ ಮಹಿಳೆಗೆ ಆಕೆಯ ಪತಿಯೇ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾನೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಹಳೇ ಭೋಪಾಲ್‌ನ ಕಬೀರ್ ವಾಲಿ ಮಸೀದಿ ಬಳಿಯ ಜನನಿಬಿಡ ರಸ್ತೆಯಲ್ಲೇ ಆರೋಪಿ ರಯೀಸ್ ಖಾನ್ ತನ್ನ ಪತ್ನಿ ಮುಸ್ಕಾನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ನೆರೆಯ ರಾಜಸ್ಥಾನ ಮೂಲದ ದಂಪತಿ ಕಳೆದ ಕೆಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅವರು ರಾಜಸ್ಥಾನದಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಒಂದು ವರ್ಷದ ನಂತರ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ ಕಾರಣ ತಾನು ಒಂಟಿಯಾಗಿ ಬದುಕಲು ನಿರ್ಧರಿಸಿದ್ದೇನೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಸುಮಾರು ಎಂಟು ತಿಂಗಳ ಹಿಂದೆ, ಆಕೆ ಭೋಪಾಲ್‌ನ ವೃದ್ಧಾಶ್ರಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬುಧವಾರ ರಾತ್ರಿ ಮುಸ್ಕಾನ್ ವೃದ್ಧಾಶ್ರಮದಿಂದ ಹೊರಗೆ ಬರುತ್ತಿದ್ದಾಗ ಪತಿ ರಸ್ತೆಬದಿ ನಿಂತಿರುವುದು ಕಂಡಿದ್ದರು. ಈ ವೇಳೆ ರಯೀಸ್ ತನ್ನೊಂದಿಗೆ ರಾಜಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದು, ಅದಕ್ಕೆ ಪತ್ನಿ ನಿರಾಕರಿಸಿದ್ದಾರೆ. ಈ ವೇಳೆ ಪೆಟ್ರೋಲ್ ತೆಗೆದು ಮುಸ್ಕಾನ್‌ಗೆ ರಯೀಸ್ ಬೆಂಕಿ ಹಚ್ಚಿದ್ದಾನೆ.
ಇದನ್ನೂ ಓದಿ: Kaali poster row: ಲೀನಾ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸುವಂತೆ ಗೃಹ ಸಚಿವರ ಆಗ್ರಹ
ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಯೀಸ್ ಖಾನ್ ಬಂಧನಕ್ಕೆ ಶೋಧವನ್ನು ಪ್ರಾರಂಭಿಸಲಾಗಿದೆ. ಸಂತ್ರಸ್ತೆಯ ಕಿರುಚಾಟವನ್ನು ಕೇಳಿದ ಸ್ಥಳೀಯರು ಆಕೆಯ ಕಡೆಗೆ ಧಾವಿಸಿದರು ಮತ್ತು ನೀರಿನಿಂದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆಗೆ ಶೇ.8 ರಿಂದ 9 ರಷ್ಟು ಸುಟ್ಟ ಗಾಯಗಳಾಗಿದ್ದು, ಹಮೀಡಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.