ಅಹಮದಾಬಾದ್ (ಗುಜರಾತ್): ಜಗತ್ತಿನಲ್ಲಿ ಕೊರೊನಾ ಭೀತಿ ಮತ್ತೆ ಶುರುವಾದ ಬೆನ್ನಲ್ಲೇ ಗುಜರಾತ್‌ನಲ್ಲಿ ವಿದೇಶದಿಂದ ಬಂದಿರುವ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಆಸ್ಟ್ರೇಲಿಯಾದಿಂದ ಬಂದ ಯುವತಿ ಹಾಗೂ ಚೀನಾದಿಂದ ಪುರುಷನಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಗುಜರಾತ್‌ನಲ್ಲಿ ಕೇವಲ 20 ಕೋವಿಡ್ ಪಾಸಿಟಿವ್ ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಇದರಲ್ಲಿ ಯಾವ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿಲ್ಲ. ಎಲ್ಲ ಆರೋಗ್ಯ ಸ್ಥಿರವಾಗಿವೆ. ಇದೀಗ ಬೇರೆಡೆ ಕೊರೊನಾ ಹಾವಳಿ ಆರಂಭವಾದ ಹಿನ್ನೆಲೆಯಲ್ಲಿ ಹಾಸಿಗೆಗಳ ಸಂಖ್ಯೆ, ಸಾಕಷ್ಟು ಪ್ರಮಾಣದ ಔಷಧಿ ಮತ್ತು ಸಿಬ್ಬಂದಿ ಸಂಖ್ಯೆಯನ್ನು ನಿಯೋಜಿಸುವ ಮೂಲಕ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದರ ನಡುವೆ ರಾಜ್‌ಕೋಟ್‌ಗೆ ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಬಂದ ಯುವತಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಮೊದಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದ ಈ ಯುವತಿ ಅಲ್ಲಿಂದ ರಾಜ್‌ಕೋಟ್‌ಗೆ ಬಂದಿದ್ದಳು. ಈ ವೇಳೆ ಕೊರೋನಾ ವರದಿ ಪಾಸಿಟಿವ್ ಬಂದಿದೆ. ಅಂತೆಯೇ, ಆರೋಗ್ಯ ಸಿಬ್ಬಂದಿ ಸೋಂಕಿತ ಯುವತಿಯನ್ನು ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ. ಅಲ್ಲದೇ, ಯುವತಿ ಮನೆಯ ಇರುವ ಇಡೀ ಪ್ರದೇಶದಲ್ಲಿ ಸಾಮೂಹಿಕವಾಗಿ ಕೊರೊನಾ ಪರೀಕ್ಷೆಯನ್ನು ಸಹ ಮಾಡಲಾಗುತ್ತಿದೆ.
ಇದೇ ವೇಳೆ ಭಾವನಗರ ನಗರದಲ್ಲೂ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಒಂದು ದಿನದ ಹಿಂದೆ ಚೀನಾದಿಂದ ಬಂದಿದ್ದ 34 ವರ್ಷದ ವ್ಯಕ್ತಿಗೆ ರ‍್ಯಾಂಡಮ್ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅದರ ವರದಿಯನ್ನು ಗಾಂಧಿನಗರಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ, ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ಆರೋಗ್ಯ ಇಲಾಖೆ ತಂಡದೊಂದಿಗೆ ಸಭೆ ನಡೆಸಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ಹೇಳಿದ್ದಾರೆ. ಕೋವಿಡ್‌ನ ಹೊಸ ಪ್ರಕರಣಗಳ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಸಹ ಮಾಡಲಾಗುತ್ತಿದ್ದು, ಸಭೆಯಲ್ಲಿ ಕೊರೊನಾ ಪರಿಸ್ಥಿತಿ ಮತ್ತು ಲಸಿಕೆ ಬಗ್ಗೆ ಚರ್ಚಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ.. ವಿಮಾನ ನಿಲ್ದಾಣಗಳಲ್ಲಿ ರ‍್ಯಾಂಡಮ್ ಟೆಸ್ಟ್: ಕೇಂದ್ರ ಸಚಿವ ಮಾಂಡವಿಯಾ