ನವದೆಹಲಿ: ಗುಜರಾತ್ ಮೂಲದ ಔಷಧಿ ಉತ್ಪಾದನಾ ಕಂಪನಿ ಝೈಡಸ್ ಕ್ಯಾಡಿಲಾ ಕೊರೊನಾ ಸೋಂಕಿಗೆ ರೆಮ್ಡಿಸಿವಿರ್ ಔಷಧವನ್ನು ರೆಮ್ಡ್ಯಾಕ್ ಬ್ರಾಂಡ್ನ ಹೆಸರಿನಲ್ಲಿ ಬಿಡುಗಡೆ ಮಾಡಿರುವುದಾಗಿ ಬುಧವಾರ ಹೇಳಿಕೊಂಡಿದೆ.
100 ಎಂಜಿ ಇರುವ ಸೀಸೆಗೆ 2,800 ರೂಪಾಯಿ ನಿಗದಿಪಡಿಸಲಾಗಿದ್ದು, ಇದು ಭಾರತದಲ್ಲಿ ಅತಿ ಕಡಿಮೆ ದರ ಎಂದು ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಸ್ಪಷ್ಟನೆ ನೀಡಿದೆ.
ದೇಶಾದ್ಯಂತ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಔಷಧ ತಲುಪಿಸಿ, ಹೇರಳವಾಗಿ ದೊರೆಯುವಂತೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ರೆಮ್ಡ್ಯಾಕ್ ಜನರ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದು, ಎಲ್ಲಾ ಸೋಂಕಿತರಿಗೆ ಸಿಗುವಂತೆ ಮಾಡುತ್ತೇವೆ ಎಂದು ಕ್ಯಾಡಿಲಾ ಹೆಲ್ತ್ ಕೇರ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರಾವಿಲ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಸುಧಾರಣೆ, ವ್ಯಾಕ್ಸಿನ್ ಆಭಿವೃದ್ಧಿ, ಕೆಲವು ಔಷಧಗಳ ವಿತರಣೆ, ಹೊಸ ಚಿಕಿತ್ಸಾ ವಿಧಾನಗಳ ಬಳಕೆ ಮುಂತಾದ ವಿಚಾರಗಳ ಬಗ್ಗೆ ಕಂಪನಿ ಗಮನ ಕೇಂದ್ರೀಕರಿಸಿದೆ ಎಂದು ಡಾ. ಶ್ರಾವಿಲ್ ಪಟೇಲ್ ಸ್ಪಷ್ಟನೆ ನೀಡಿದ್ದಾರೆ.
ಈ ವರ್ಷದ ಜೂನ್ನಲ್ಲಿ ಝೈಡಸ್ ಕಂಪನಿಯು ಜಿಲೀಡ್ ಸೈನ್ಸಸ್ ಜೊತೆಗೆ ಕೊರೊನಾಗೆ ಔಷಧ ಉತ್ಪಾದಿಸುವ ವಿಚಾರವಾಗಿ ಒಪ್ಪಂದ ಮಾಡಿಕೊಂಡಿದ್ದವು. ಇದರ ಜೊತೆಗೆ ರೆಮ್ಡಿಸಿವಿರ್ ಔಷಧವನ್ನು ತುರ್ತು ಸಂದರ್ಭಗಳಲ್ಲಿ ಕೊರೊನಾ ಸೋಂಕಿತರಿಗೆ ಬಳಸಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಅನುಮತಿ ನೀಡಿತ್ತು.
ಈಗ ರೆಮ್ಡ್ಯಾಕ್ ಹೆಸರಿನಲ್ಲಿ ಕೊರೊನಾ ಸೋಂಕಿಗೆ ಔಷಧವನ್ನು ಝೈಡಸ್ ಕ್ಯಾಡಿಲಾ ಬಿಡುಗಡೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಜನರ ಕೈಗೆ ಸಿಗುವ ಸಾಧ್ಯತೆ ಇದೆ.