ಮುಂಬೈ: ಉತ್ತರಪ್ರದೇಶ ರಾಜ್ಯವು ಚಲನಚಿತ್ರಗಳ ವ್ಯವಹಾರಗಳನ್ನು ವಾಣಿಜ್ಯ ನಗರಿ ಮುಂಬೈನಿಂದ ಕೊಂಡೊಯ್ಯಲು ಬಯಸುವುದಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಿನಿಮಾ ರಂಗವು ಮುಕ್ತ ವೇದಿಕೆಯ ಸ್ಪರ್ಧೆಯಾಗಿದೆ.
ಇಲ್ಲಿ ಪ್ರತಿಭೆಗಳು ಕೆಲಸ ಮಾಡುವ ಸರಿಯಾದ ವಾತಾವರಣ ಹಾಗೂ ಸರಿಯಾದ ಸುರಕ್ಷತೆ ನೀಡುವವರು ಉತ್ತಮ ಹೂಡಿಕೆಗಳನ್ನು ಪಡೆಯುತ್ತಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಮಹಾರಾಷ್ಟ್ರಕ್ಕೆ ದಕ್ಕಬೇಕಾದ ಫಿಲ್ಮ್ ಸಿಟಿಯನ್ನು ಯುಪಿ ಕಸಿದುಕೊಳ್ಳಲು ಸಂಚು ರೂಪಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಷ್ಟೇ ಅಲ್ಲ, ತಮ್ಮ ರಾಜ್ಯದ ವ್ಯವಹಾರಗಳನ್ನು ಬಲವಂತವಾಗಿ ಕಿತ್ತುಕೊಳ್ಳಲು ಯಾರಿಗೂ ಅವಕಾಶ ನೀಡಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದರು. ನಾವು ಯಾರ ಹೂಡಿಕೆಯನ್ನೂ ಕಸಿದುಕೊಳ್ಳುತ್ತಿಲ್ಲ ಅಥವಾ ತಡೆಯುತ್ತಿಲ್ಲ ಎಂದು ಆದಿತ್ಯ ನಾಥ್ ಹೇಳಿದರು.
ಯಾರೂ ಏನನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ರೀತಿ ಕೊಂಡೊಯ್ಯಲು ಅದೇನು ಪರ್ಸ್ ಅಲ್ಲ. ಇದು ಮುಕ್ತ ಸ್ಪರ್ಧೆಯಾಗಿದೆ. ಸುರಕ್ಷಿತ ವಾತಾವರಣ, ಉತ್ತಮ ಸೌಲಭ್ಯಗಳು ಹಾಗೂ ವಿಶೇಷವಾಗಿ ಸಾಮಾಜಿಕ ಭದ್ರತೆ ನೀಡುವವರು ತಾರತಮ್ಯವಿಲ್ಲದೆ ಕೆಲಸ ಮಾಡಬಹುದು ಎಂದು ಅವರು ಹೇಳಿದರು. ಫಿಲ್ಮ್ ಸಿಟಿಯನ್ನು ಬೇರೆ ನಗರಕ್ಕೆ ಶಿಫ್ಟ್ ಮಾಡುವುದು ಸುಲಭವಾದ ಕೆಲಸವಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಆದಿತ್ಯನಾಥ್, "ನಾವು ಏನನ್ನೂ ತೆಗೆದುಕೊಳ್ಳಲು ಇಲ್ಲಿಗೆ ಬಂದಿಲ್ಲ" ಎಂದು ಹೇಳಿದರು.
"ನಾವು ಹೊಸದನ್ನು ರಚಿಸುತ್ತಿದ್ದೇವೆ. ಆ ಬಗ್ಗೆ ನೀವೇಕೆ ಆತಂಕಗೊಂಡಿದ್ದೀರಿ, ನಾವು ಎಲ್ಲರಿಗೂ ಹೊಸ ವಿಶ್ವದರ್ಜೆಯ ಮೂಲಸೌಕರ್ಯವನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರೂ ಬೆಳೆಯಬೇಕು, ಅವರ ಆಲೋಚನೆಯನ್ನು ವಿಸ್ತರಿಸಬೇಕು ಮತ್ತು ಅದಕ್ಕಾಗಿ ಹೊಸತನದ ಉತ್ತಮ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಅದನ್ನು ಜನರಿಗೆ ನೀಡಲು ನಾವು ಪ್ರಯತ್ನಿಸುತ್ತೇವೆ ಎಂದು ಯೋಗಿ ಹೇಳಿದ್ದಾರೆ.