ರಾಯಗಡ: ಲಾಕ್ಡೌನ್ ಹಿನ್ನೆಲೆಯಲ್ಲಿ ದೇಶವೇ ಸಂಪೂರ್ಣ ಸ್ತಬ್ಧಗೊಂಡಿದೆ. ಕೂಲಿ ಮತ್ತು ಕಟ್ಟಡ ಕಾರ್ಮಿಕರು ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿದ್ದಾರೆ. ಎಷ್ಟೋ ಮಂದಿ ತಮ್ಮ ಊರುಗಳಿಗೆ ತೆರಳು ಸಾಧ್ಯವಾಗದೆ ನರಳುತ್ತಿದ್ದಾರೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲೂ 80 ವರ್ಷದ ಮುದುಕಿ ಮೂರು ದಿನಗಳ ಕಾಲ ಕಾಲ್ನಡಿಗೆಯಲ್ಲೇ 175 ಕಿ.ಮೀ. ನಡೆದುಕೊಂಡೇ ಮನೆ ಸೇರಿದ್ದಾರೆ. ಮುಂಬೈನಲ್ಲಿ ವಾಸಿಸಿರುವ ಕೆರಿಬಾಯಿ ಧರ್ಮ ಪಾಟೀಲ್ ಎಂಬುವರು ನೆರುಲ್ ನವೀ ಮುಂಬೈನಿಂದ ನಡೆದುಕೊಂಡು ಮಾಸ್ಲಾ ತಾಲೂಕಿನ ಮೆಂಡಿ ಗ್ರಾಮ ತಲುಪಿದ್ದಾರೆ. ಕೇಂದ್ರ ಸರ್ಕಾರ 21 ದಿನಗಳ ಲಾಕ್ಡೌನ್ ಘೋಷಿಸಿದ ಪರಿಣಾಮ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ 175 ಕಿ.ಮೀ. ನಡೆದುಕೊಂಡೇ ತಮ್ಮ ಗ್ರಾಮ ತಲುಪಿದ್ದಾರೆ.
ಅಜ್ಜಿ ಊರು ತಲುಪಿದ ಬಳಿಕ ಪೊಲೀಸರು ವಿಚಾರಣೆ ನಡೆಸಿದರು. ಡಿಗಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರೇ ಮುದುಕಿಗೆ ಬೇಕಾದ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸಿ ಮಾನವೀಯತೆ ಮರೆದಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಪೊಲೀಸರೇ ಮನೆಗೆ ಕರೆತಂದು ಬಿಟ್ಟು ಹೋಗಿದ್ದಾರೆ.