ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭೇಟಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಅಂದುಕೊಡಿರುವಂತೆ ನಡೆದರೆ ಇಂದು ಸಂಜೆ ಆರು ಗಂಟೆಗೆ ಅವರು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ.
ಕಳೆದೆರಡು ದಿನಗಳಿಂದ ಮಧ್ಯಪ್ರದೇಶದಲ್ಲಿ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ನಡೆಯುತ್ತಿದ್ದು, ಈಗಾಗಲೇ ಕಾಂಗ್ರೆಸ್ನ 20ಕ್ಕೂ ಹೆಚ್ಚು ಶಾಸಕರು( ಆರು ಸಚಿವರು ಸೇರಿ) ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಹ ಸಲ್ಲಿಕೆ ಮಾಡಿದ್ದಾರೆ.
ಇದೀಗ ಅವರು ಸಂಜೆ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಜ್ಯೋತಿರಾದಿತ್ಯ ಬಿಜೆಪಿ ಸೇರಿಕೊಂಡರೆ ರಾಜ್ಯಸಭೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ಮುಖಂಡೆ ಯಶೋಧರಾ ಸಿಂದಿಯಾ, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 'ಘರ್ ವಾಪಸಿ' ಆಗುತ್ತಿರುವುದು ನಿಜಕ್ಕೂ ಸಂತಸ ಎಂದಿದ್ದಾರೆ.
ಮಧ್ಯಪ್ರದೇಶದ ವಿಧಾನಸಭೆ 228 ಶಾಸಕರನ್ನೊಳಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನ ಹಾಗೂ ಬಿಜೆಪಿ 107 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿಕೊಂಡಿತ್ತು. ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ವಿಫಲಗೊಂಡಿತ್ತು. ಹೀಗಾಗಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು.