ನವದೆಹಲಿ: ಭಾರತ-ಚೀನಾದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಕಳೆದ ಹಲವು ದಿನಗಳಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿಯಲ್ಲಿ ಪದೇ ಪದೆ ಕ್ಯಾತೆ ತೆಗೆಯುತ್ತಿರುವ ಕಮ್ಯೂನಿಸ್ಟ್ ರಾಷ್ಟ್ರ ಚೀನಾ ಎಲ್‌ಎಸಿನಲ್ಲಿ ಹೆಚ್ಚಿನ ಸೈನಿಕರನ್ನು ಜಮಾವಣೆ ಮಾಡುವ ಮೂಲಕ ಆತಂಕವನ್ನು ಸೃಷ್ಟಿಸಿದೆ. ಚೀನಾದ ಈ ನಿರ್ಧಾರದ ಇಂದಿನ ಮರ್ಮವೇನು ಎಂಬುದರ ಕುರಿತು ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ಚೀನಾ ರಾಜಕೀಯ, ಅಲ್ಲಿನ ಸ್ಥಿತಿಗತಿಗಳನ್ನು ಹತ್ತಿರದಿಂದ ಬಲ್ಲ ಜಯದೇವ ರಾನಡೆ ಅವರು ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.
ಚೀನಾದಲ್ಲಿ ಈ ಮೊದಲು ಇದ್ದಂತಹ ಪರಿಸ್ಥಿತಿ ಈಗಿಲ್ಲ. ಆರ್ಥಿಕ ಕುಸಿತ, ನಿರುದ್ಯೋಗ ಹಾಗೂ ಆಹಾರದ ಬೆಲೆ ಗಗನಕ್ಕೆ ಏರಿರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿನ ಜನ ಕ್ಸಿ ಜಿನ್ಪಿಂಗ್ ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಸರ್ಕಾರದ ವಿರುದ್ಧ ಎದ್ದಿರುವ ಜನ ವಿರೋಧಿ ಅಲೆ ತಗ್ಗಿಸಲು ಕ್ಸಿ ಜಿನ್ಪಿಂಗ್ ಗಡಿ ಕ್ಯಾತೆಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ರಾನಡೆ ವಿಶ್ಲೇಷಿಸಿದ್ದಾರೆ.
20 ಲಕ್ಷ ಇದ್ದ ನಿರುದ್ಯೋಗದ ಪ್ರಮಾಣ ಇದೀಗ 80 ಲಕ್ಷಕ್ಕೆ ಏರಿಕೆಯಾಗಿದೆ. ಹಾಂಕಾಂಗ್, ತೈವಾನ್‌ನೊಂದಿಗೆ ಸಂಘರ್ಷ ಸೇರಿದಂತೆ ಸರ್ಕಾರದ ವಿಫಲತೆಗಳಿಂದ ಅಲ್ಲಿನ ಪ್ರಜೆಗಳು ಬೇಸತ್ತು ಕಮ್ಯೂನಿಸ್ಟ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ವಿರೋಧಿ ಅಲೆಯಿಂದ ಪಾರಾಗಲು ಅಧ್ಯಕ್ಷ ಕ್ಸಿ ಜಿನ್ಪಿಂಗ್ ಎಲ್‌ಎಸಿಯನ್ನು ಅಗ್ರ ವಿಷಯವಾಗಿಟ್ಟುಕೊಂಡಿದ್ದಾರೆ. ಸರ್ಕಾರದ ಉನ್ನತ ಆದೇಶಗಳು ಇಲ್ಲದೆ ಗಡಿಯಲ್ಲಿ ಇಂತಹ ಸನ್ನಿವೇಶಗಳು ನಡೆಯಲು ಸಾಧ್ಯವಿಲ್ಲ. ಅಲ್ಲಿನ ಸೇನೆಯ ಉಪ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದಾರೆ ಎಂದರು. ಉನ್ನತ ಮಟ್ಟದ ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.