ಅಂಬಾಲ (ಹರಿಯಾಣ): ಅಂಬಾಲದಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ನೆಲೆಯ ಸುತ್ತಲೂ ಹಾರುತ್ತಿರುವ ಪಕ್ಷಿಗಳಿಂದ ಯುದ್ಧ ವಿಮಾನಗಳಿಗೆ, ವಿಶೇಷವಾಗಿ ರಫೇಲ್‌ಗೆ ಅಪಾಯ ಆಗಬಹುದು ಎಂದು ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ದೊಡ್ಡ ಗಾತ್ರದ ಮತ್ತು ಸಣ್ಣ ಗಾತ್ರದ ಪಕ್ಷಿಗಳನ್ನು ವಾಯುನೆಲೆಯಿಂದ ದೂರವಿಡುವುದು ಮುಖ್ಯ ಎಂದು ಸಿಂಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಭಾಗದಲ್ಲಿ ಕಸ ಸಂಗ್ರಹವನ್ನು ತಡೆದಲ್ಲಿ ಪಕ್ಷಿಗಳ ಹಾರಾಟ ಮತ್ತು ಪಾರಿವಾಳಗಳ ಸಂತಾನೋತ್ಪತ್ತಿ ಚಟುವಟಿಕೆಯನ್ನು ನಿಯಂತ್ರಿಸಬಹುದು. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಂಬಾಲದ ನಾಗರಿಕ ಆಡಳಿತದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
"ಅಂಬಾಲ ವಾಯುಪಡೆ ನಿಲ್ದಾಣದ ಸುತ್ತಲೂ ಪಾರಿವಾಳ ಸಂತಾನೋತ್ಪತ್ತಿ ಚಟುವಟಿಕೆಗಳನ್ನು ನಿಲ್ಲಿಸುವಂತೆ ನಾವು ಜನರಿಗೆ ಸೂಚನೆ ನೀಡಿದ್ದೇವೆ. ಏಕೆಂದರೆ ಇದು ವಿಮಾನಕ್ಕೆ ಅಪಾಯವನ್ನುಂಟು ಮಾಡುತ್ತದೆ. ಬೇಸ್‌ನ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಕ್ಷಿಗಳನ್ನು ಸಾಕಲು ಯಾರಿಗೂ ಅವಕಾಶವಿಲ್ಲ" ಎಂದು ನಗರ ಯೋಜನಾ ಅಧಿಕಾರಿ ಅನಿಲ್ ರಾಣಾ ಹೇಳಿದ್ದಾರೆ. ಈ ಕುರಿತು ಅಂಬಾಲ ಮಹಾನಗರ ಪಾಲಿಕೆ ಜನರಿಗೆ ಸೂಚನೆ ನೀಡಿದೆ.
"ರಫೇಲ್ ಬಹಳ ಮುಖ್ಯವಾದ ವಿಮಾನ. ಜನರು ಎಚ್ಚರಿಕೆಗೆ ಕಿವಿಗೊಟ್ಟು ಪಕ್ಷಿಗಳನ್ನು ಸಾಕದಂತೆ ನೋಡಿಕೊಳ್ಳಬೇಕು. ಸೂಚನೆಯನ್ನು ತಿರಸ್ಕರಿಸಿದರೆೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.