ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಜಗತ್ತಿನ ಪ್ರಮುಖ 10 ಕಲುಷಿತ ನಗರಗಳಲ್ಲಿ ಭಾರತದ 2 ನಗರಗಳು ಸ್ಥಾನ ಪಡೆದಿವೆ.
ಇದರಲ್ಲಿ ರಾಷ್ಟ್ರ ರಾಜಧಾನಿ ನಂ.1 ಸ್ಥಾನದ ಪಡೆದಿದ್ದು, ಭಾರತದಲ್ಲಿ ಕಲುಷಿತ ವಾತಾವರಣಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಾಪನದ ಅನ್ವಯ, ದೆಹಲಿ 549 ಅಂಕಪಡೆದು ಅಪಾಯಕಾರಿ ಮಟ್ಟದಲ್ಲಿದೆ. ಕೋಲ್ಕತ್ತಾ ಕೂಡ ಟಾಪ್ 4ನೇ ಸ್ಥಾನ ಪಡೆದು 166 ಅಂಕ ಪಡೆದಿದೆ ಎಂದು ತಿಳಿಸಿದೆ.
10 ನಗರಗಳಲ್ಲಿ ಸರಾಸರಿ ಎಕ್ಯೂಐ ಸಾಂದ್ರತೆ ಸುಮಾರು 160 ಗಿಂತ ಹೆಚ್ಚಿದ್ದು ಪೋಲ್ಯಾಂಡ್ನ 3, ಪಾಕಿಸ್ತಾನ, ಚೀನಾ, ಅಮೆರಿಕ, ಬಾಂಗ್ಲಾ ಮತ್ತು ಯುಎಇನ ತಲಾ 1 ನಗರ ಅತಿ ಹೆಚ್ಚು ಮಾಲಿನ್ಯಕ್ಕೆ ಒಳಗಾಗುತ್ತಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಲಾಹೋರ್ ವಿಶ್ವದ ಟಾಪ್ 10 ಲಿಸ್ಟ್‌ನಲ್ಲಿ 2ನೇ ಸ್ಥಾನದಲ್ಲಿದೆ. ಪೋಲ್ಯಾಂಡ್ನ ಪೊಜ್ನಾನ್ (3), ಕ್ರಾಕೋವ್ (5) ಮತ್ತು ವಾರ್ಸಾ (6), ಚೀನಾದ ಚಾಂಗ್ಕಿಂಗ್ (7), ಅಮೆರಿಕದ ಡೆನ್ವರ್ (8), ಬಾಂಗ್ಲಾದ ಢಾಕಾ (9) ಮತ್ತು ಯುಎಇನ ದುಬೈ (10) ಸ್ಥಾನದಲ್ಲಿವೆ.
ವಾಯುಮಾಲಿನ್ಯ ಹೆಚ್ಚಿದ್ದರೆ ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳೂ ಬರುತ್ತವೆ. ಅತೀ ಹೆಚ್ಚು ಕಲುಷಿತ ಗಾಳಿ ಇರುವ ಭಾಗದಲ್ಲಿ ವಾಸಿಸುವ ಪ್ರತಿ ನೂರು ಜನರ ಪೈಕಿ 90 ಮಂದಿ ಅತ್ಯಂತ ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ.