ಸೂರತ್(ಗುಜರಾತ್) : 'ಡೈಮಂಡ್ ಸಿಟಿ' ಸೂರತ್ ಡೈಮಂಡ್ ವಿಚಾರದಲ್ಲಿ ಗಿನ್ನೆಸ್ ದಾಖಲೆ ಬರೆದಿದೆ. ನಗರದ ಆಭರಣ ಮಳಿಗೆಯಲ್ಲಿ ತಯಾರಿಸಿರುವ ವಜ್ರದುಂಗುರ ದಾಖಲೆಗೆ ಕಾರಣವಾಗಿದೆ.
ಸೂರತ್ನ ವಿಶಾಲ್ ಅಗರ್ವಾಲ್ ಹಾಗೂ ಖುಶ್ಬೂ ಅಗರ್ವಾಲ್ ದುಬಾರಿ ವಜ್ರದುಂಗುರವೊಂದನ್ನು ಡಿಸೈನ್ ಮಾಡಿದ್ದಾರೆ. ಇದನ್ನು ಕಮಲದ ಹೂವಿನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಲೋಟಸ್ ಡೈಮಂಡ್ ರಿಂಗ್(ಕಮಲದುಂಗುರ) ಎಂದೇ ಹೇಳಲಾಗುತ್ತಿದೆ. ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಯಾಕಂದ್ರೆ, ಇದರ ಮೌಲ್ಯ ಬರೋಬ್ಬರಿ 29 ಕೋಟಿ ರೂಪಾಯಿ!
ಇಷ್ಟೊಂದು ದುಬಾರಿ ಬೆಲೆಯ ವಜ್ರದ ಉಂಗುರವನ್ನು ಜಗತ್ತಿನ ಯಾವುದೇ ಭಾಗದಲ್ಲಿ ಇದುವರೆಗೆ ತಯಾರಿಸಿಲ್ಲ. ಹೀಗಾಗಿ ದೇಶದ ವಜ್ರದ ನಗರಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ವಜ್ರದ ಉಂಗುರ 2018ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ.
ಗುಜರಾತ್ನ ಸೂರತ್ನಲ್ಲಿರುವ ಈ ವಜ್ರದ ಉಂಗುರ ವಿಶ್ವದ ಅತ್ಯಂತ ದುಬಾರಿ ವಜ್ರದ ಉಂಗುರ ಎಂದು ಗುರುತಿಸಲ್ಪಟ್ಟಿದೆ. ಸದ್ಯ ಈ ಕಮಲದ ಉಂಗುರ ಹಾಲಿವುಡ್‌ನಿಂದ ಹಿಡಿದು ಬಾಲಿವುಡ್‌ಗೆ ನಟಿಯರನ್ನೂ ಆಕರ್ಷಿಸುತ್ತಿದೆ. ಉಂಗುರ ತಯಾರಿಸುವ ವಜ್ರ ಕಂಪನಿ 6690 ವಜ್ರದ ತುಣುಕುಗಳೊಂದಿಗೆ ತಯಾರಿಸಿದೆ.
ಈ ಉಂಗುರ ಕೇವಲ 58 ಗ್ರಾಂ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಉಂಗುರ ವಿನ್ಯಾಸಕರು 6 ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ, ಈ ಕಮಲದ ಉಂಗುರವನ್ನೇ ವಿನ್ಯಾಸಕರು ವಿನ್ಯಾಸ ಮಾಡಲು ಕಾರಣವೂ ಇದೆಯಂತೆ. ಇದರ ಮುಖ್ಯ ಉದ್ದೇಶ ಜಲ ಸಂರಕ್ಷಣೆ ಎಂದು ವಿನ್ಯಾಸಕರು ಹೇಳಿದ್ದಾರೆ. ಕಮಲ ದೇಶದ ರಾಷ್ಟ್ರೀಯ ಹೂವಾಗಿದ್ದು, ಈ ಮೂಲಕ ಜಲಸಂರಕ್ಷಣೆಯ ಸಂದೇಶ ಇದೆ ಎಂದು ಉಂಗುರ ತಯಾರಕರು ತಿಳಿಸಿದ್ದಾರೆ.