ಹೈದರಾಬಾದ್: ಕಿಲ್ಲರ್ ಕೊರೊನಾಗೆ ಜಗತ್ತು ತಲ್ಲಣಿಸಿದೆ. ಈವರೆಗೆ 85,70,266 ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 4,55,578 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜು 45,09,256 ಕ್ಕೂ ಅಧಿಕ ಸೋಂಕಿತರು ವೈರಾಣುವಿನ ಕಬಂಧ ಬಾಹುಗಳಿಂದ ಬಿಡಿಸಿಕೊಂಡು ಗುಣಮುಖರಾಗಿದ್ದಾರೆ.
ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 22,63,630 ಇದ್ದು, ಮೃತರ ಸಂಖ್ಯೆ 1,20,688ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 9,83,359 ಪ್ರಕರಣಗಳು ಹಾಗೂ 47,869 ಸಾವುಗಳು ವರದಿಯಾಗಿದೆ.
ಸೋಂಕಿತರ ಪೈಕಿ ರಷ್ಯಾ 3ನೇ ಸ್ಥಾನದಲ್ಲಿದ್ದು, ಈವರೆಗೆ 5,61,091 ಕೇಸ್ಗಳು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ 3,81,091 ಸೋಂಕಿತರು ಪತ್ತೆಯಾಗಿದ್ದಾರೆ.
ಕೋವಿಡ್ನಿಂದಾಗಿ ಮುಖಗವಸು ಧರಿಸುವುದು ಇದೀಗ ಬದುಕಿನ ಅವಿಭಾಜ್ಯ ಭಾಗವಾಗುತ್ತಿದೆ. ಅನೇಕ ರಾಷ್ಟ್ರಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಮನೆಯಿಂದ ಹೊರಹೋಗುವಂತೆ ಪ್ರಜೆಗಳಿಗೆ ಸೂಚಿಸಿವೆ. ಈಗಾಗಲೇ ಹಲವೆಡೆ ಲಾಕ್ಡೌನ್ ಸಡಿಲಗೊಂಡು ರೆಸ್ಟೋರೆಂಟ್, ಹೋಟೆಲ್, ಶಾಪಿಂಗ್ ಮಾಲ್ಗಳು ತೆರೆದಿದ್ದು, ಗ್ರಾಹಕರು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.