ಹೈದರಾಬಾದ್: ಅಧಿಕ ರಕ್ತದೊತ್ತಡದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಆಧುನಿಕ ಸಾಂಕ್ರಾಮಿಕ ಎನ್ನಲಾಗುವ ಈ ರೋಗವನ್ನು ತಡೆಗಟ್ಟುವ ಸಲುವಾಗಿ, ಎಲ್ಲಾ ದೇಶಗಳ ನಾಗರಿಕರನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ. 17 ರಂದು ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಮೊದಲ ಬಾರಿಗೆ 2005ರ ಮೇನಲ್ಲಿ ಆರಂಭಿಸಲಾಯಿತು. ಅಂದಿನಿಂದ ಇದನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.
ಅಧಿಕ ರಕ್ತದೊತ್ತಡ ಎಂದರೇನು?
ಅಧಿಕ ರಕ್ತದೊತ್ತಡ ಗಂಭೀರ ವೈದ್ಯಕೀಯ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವಿವರಿಸುವಂತೆ ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಕುರುಡುತನದಂತಹ ಕಾಯಿಲೆಗಳನ್ನು ಇದು ಹೆಚ್ಚಿಸುತ್ತದೆ. ವಿಶ್ವದಾದ್ಯಂತ ಅಕಾಲಿಕ ಮರಣಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ.
ಅಂದಾಜು 1.13 ಶತಕೋಟಿ ಜನ ಈ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. 5 ಜನರಲ್ಲಿ 1 ಕ್ಕಿಂತ ಕಡಿಮೆ ಜನರು ಇದನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಅಧಿಕ ರಕ್ತದೊತ್ತಡದ ಏರಿಕೆಗೆ ಮುಖ್ಯ ಕಾರಣವೆಂದರೆ ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ನಿಷ್ಕ್ರಿಯತೆ ಮತ್ತು ಆಲ್ಕೋಹಾಲ್ ಹಾಗೂ ತಂಬಾಕಿನ ಸೇವನೆ.
ಅಧಿಕ ರಕ್ತದೊತ್ತಡಕ್ಕೆ ಕಾರಣಗಳು:
WHO ಅಧ್ಯಯನದ ಪ್ರಕಾರ, ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಅಪಾಯಕಾರಿ ಅಂಶಗಳೆಂದರೆ ಅತಿಯಾದ ಉಪ್ಪು ಸೇವನೆ, ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬುಗಳು ಅಧಿಕವಾಗಿರುವ ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು. ದೈಹಿಕ ನಿಷ್ಕ್ರಿಯತೆ, ತಂಬಾಕು ಮತ್ತು ಆಲ್ಕೋಹಾಲ್ ಸೇವನೆ, ಅಧಿಕ ತೂಕ ಅಥವಾ ಬೊಜ್ಜು, ವಯೋಸಹಜ ಕಾಯಿಲೆಗಳಾದ ಮಧುಮೇಹ ಅಥವಾ ಮೂತ್ರಪಿಂಡ ಸಮಸ್ಯೆಯಿಂದಲೂ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಗಳಿದೆ.
ಲಕ್ಷಣಗಳು
ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಅಂತಲೂ ಕರೆಯಲಾಗುತ್ತದೆ. ಹೆಚ್ಚಿನ ಜನರಿಗೆ ಸಮಸ್ಯೆಯ ಬಗ್ಗೆ ತಿಳಿದಿರುವುದಿಲ್ಲ. ಏಕೆಂದರೆ ಇದಕ್ಕೆ ಯಾವುದೇ ಎಚ್ಚರಿಕೆ ಚಿಹ್ನೆಗಳು ಅಥವಾ ಲಕ್ಷಣಗಳು ಇಲ್ಲ. ಈ ಕಾರಣಕ್ಕಾಗಿ, ರಕ್ತದೊತ್ತಡವನ್ನು ನಿಯಮಿತವಾಗಿ ಅಳೆಯುವುದು ಅತ್ಯಗತ್ಯ ಎಂದು ಡಬ್ಲ್ಯುಎಚ್‌ಒ ಹೇಳುತ್ತದೆ.
ಮುಂಜಾನೆ ತಲೆನೋವು, ಮೂಗಿನಲ್ಲಿ ರಕ್ತ ಬರುವಿಕೆ, ಅನಿಯಮಿತ ಹೃದಯ ಲಯಗಳು, ದೃಷ್ಟಿ ಬದಲಾವಣೆ ಮತ್ತು ಕೇಳುವಿಕೆಯಲ್ಲಿ ಬದಲಾವಣೆ ಒಳಗೊಂಡಿರಬಹುದು. ತೀವ್ರ ರಕ್ತದೊತ್ತಡವು ಆಯಾಸ, ವಾಕರಿಕೆ, ವಾಂತಿ, ಗೊಂದಲ, ಆತಂಕ, ಎದೆ ನೋವು ಮತ್ತು ಸ್ನಾಯು ನಡುಕಕ್ಕೆ ಕಾರಣವಾಗಬಹುದು.
ಅಧಿಕ ರಕ್ತದೊತ್ತಡವನ್ನು ಕಂಡುಹಿಡಿಯುವ ಏಕೈಕ ಮಾರ್ಗವೆಂದರೆ ಆರೋಗ್ಯ ವೃತ್ತಿಪರ ರಕ್ತದೊತ್ತಡ. ರಕ್ತದೊತ್ತಡವನ್ನು ಅಳೆಯುವುದು ತ್ವರಿತ ಮತ್ತು ನೋವುರಹಿತವಾಗಿರುತ್ತದೆ. ಸ್ವಯಂಚಾಲಿತ ಸಾಧನಗಳನ್ನು ಬಳಸಿಕೊಂಡು ವ್ಯಕ್ತಿಗಳು ತಮ್ಮದೇ ಆದ ರಕ್ತದೊತ್ತಡವನ್ನು ಅಳೆಯಬಹುದು.
ಮುನ್ನೆಚ್ಚರಿಕೆ ಕ್ರಮಗಳಿಂದ ತಡೆಗಟ್ಟುವಿಕೆ
ಉಪ್ಪು ಸೇವನೆ ಕಡಿಮೆ ಮಾಡುವುದು (ಪ್ರತಿದಿನ 5 ಗ್ರಾಂ ಗಿಂತ ಕಡಿಮೆ)
ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು
ನಿಯಮಿತವಾಗಿ ದೇಹ ಸಕ್ರಿಯವಾಗಿರುವಂತೆ ನೋಡಿಕೊಳ್ಳುವುದು
ತಂಬಾಕು ಸೇವನೆ ಮಾಡದಿರುವುದು
ಆಲ್ಕೊಹಾಲ್ ಕಡಿಮೆ ಮಾಡುವುದು
ಸ್ಯಾಚುರೇಟೆಡ್ ಕೊಬ್ಬಿನ ಅಂಶವಿರುವ ಆಹಾರ ಸೇವನೆ ಸೀಮಿತಗೊಳಿಸುವುದು
ಆಹಾರದಲ್ಲಿ ಟ್ರಾನ್ಸ್ ಕೊಬ್ಬನ್ನು ನಿವಾರಿಸುವುದು ಅಥವಾ ಕಡಿಮೆ ಮಾಡುವುದು
ನಿರ್ವಹಣೆ:
ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು
ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸುವುದು
ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು