ಲಕ್ನೋ(ಉ.ಪ್ರ) : ನಾವು ಎರಡು ತಿಂಗಳಿನಿಂದ ಈ ಚರಂಡಿ ಪೈಪ್ನಲ್ಲೇ ಕಾಲ ಕಳೆಯುತ್ತಿದ್ದೇವೆ. ನಮ್ಮ ಗುತ್ತಿಗೆದಾರ ಈ ಕಡೆ ತಿರಿಗಿಯೂ ನೋಡಿಲ್ಲ. ದಾರಿ ಹೋಕರು ಕರುಣೆಯಿಂದ ನೀಡುವ ಆಹಾರದಿಂದ ಜೀವನ ದೂಡಿಕೊಂಡು ಹೋಗುತ್ತಿದ್ದೇವೆ....
ಇದು ವಲಸೆ ಕಾರ್ಮಿಕರ ನೋವಿನ ಮಾತು. ದೇಶದಾದ್ಯಂತ ಲಾಕ್ಡೌನ್ ಆದೇಶ ಹಿನ್ನೆಲೆ ಅದೆಷ್ಟೋ ಕಾರ್ಮಿಕರು ದಿನನಿತ್ಯ ನರಕದ ಜೀವನ ಅನುಭಸುತ್ತಿದ್ದಾರೆ. ಕೆಲವರ ಪಾಡಂತೂ ಹೇಳತೀರದು. ಕೆಲ ವಲಸೆ ಕಾರ್ಮಿಕರು ಚರಂಡಿ ನೀರು ಹೋಗಲು ಬಳಸುವ ಬೃಹತ್ ಪೈಪ್ಗಳನ್ನೇ ಸೂರು ಮಾಡಿಕೊಂಡಿದ್ದಾರೆ.
ಲಕ್ನೋದಲ್ಲಿ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿತ್ತು. ಈ ಹಿನ್ನೆಲೆ ಇಲ್ಲಿಗೆ ಕೆಲಸಕ್ಕೆ ಆಗಮಿಸಿದ ಕಾರ್ಮಿಕರು ಲಾಕ್ಡೌನ್ ಹಿನ್ನೆಲೆ ವಾಪಸ್ ತೆರಳಲಾಗದೆ ತೀರಾ ಹೀನಾಯ ಪರಿಸ್ಥಿತಿಯಲ್ಲಿ ಜೀವನ ಕಳೆಯುತ್ತಿದ್ದಾರೆ.
ಮೂಲಗಳ ಪ್ರಕಾರ, ಲಕ್ನೋದಲ್ಲಿ ದೈನಂದಿನ ಕೂಲಿ ಮಾಡುವವರು ತೀವ್ರ ಆಹಾರ ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚಿನವರು ತಾತ್ಕಾಲಿಕ ಗುಡಿಸಲಿನಲ್ಲಿ ಇದ್ದು, ಆಹಾರ ಮತ್ತು ಆಶ್ರಯಕ್ಕಾಗಿ ಅಂಗಲಾಚುವಂತಾಗಿದೆ.
ನಾವು ಕುಕ್ರೈಲ್ ಚರಂಡಿ ಬಳಿಯ ಕೊಳವೆಗಳಲ್ಲಿ ವಾಸಿಸುತ್ತಿದ್ದೇವೆ. ನಮ್ಮಲ್ಲಿ ಹೆಚ್ಚಿನವರು ಮಧ್ಯಪ್ರದೇಶಕ್ಕೆ ಸೇರಿದವರು. ನಾವು ಕೆಲಸ ಮಾಡಿ ಜೀವನ ನಡೆಸಲು ಇಲ್ಲಿಗೆ ಬಂದಿದ್ದೆವು. ಆದರೆ, ಲಾಕ್ಡೌನ್ ಆದೇಶವಾದ್ದರಿಂದ ಅಪಾರ ನೋವನ್ನು ಅನಭವಿಸುವಂತಾಗಿದೆ ಎಂಬುದು ಇಲ್ಲಿನ ಕಾರ್ಮಿಕರು ನೋವಿನ ಮಾತು.
ನಮಗೆ ತಿನ್ನಲು ಆಹಾರ ಸಿಗುತ್ತಿಲ್ಲ.ನಾವು ಎರಡು ತಿಂಗಳಿನಿಂದ ಸಂಕಟಪಡುತ್ತಿದ್ದೇವೆ. ಸರ್ಕಾರಿ ಅಧಿಕಾರಿಗಳು ಯಾರೂ ಕೂಡ ನಮ್ಮ ರಕ್ಷಣೆಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಗುತ್ತಿಗೆದಾರನು ಈ ಬಗ್ಗೆ ಯಾವುದೇ ರೀತಿಯಾಗಿ ತಲೆಕೆಡಿಸಿಕೊಂಡಿಲ್ಲ. ನಮಗೆ ಇಲ್ಲಿ ಹಾದುಹೋಗುವ ದಾರಿಹೋಕರು ಕರುಣೆಯಿಂದ ಆಹಾರ ನೀಡುತ್ತಾರೆ. ಇದನ್ನು ತಿಂದು ನಾವು ಬದುಕುತ್ತಿದ್ದೇವೆ ಎಂದು ಕಾರ್ಮಿಕರು ತಮ್ಮ ಸಂಕಷ್ಟದ ಜೀವನದ ಬಗ್ಗೆ ಈಟಿವಿ ಭಾರತದ ಜೊತೆ ಹೇಳಿದ್ದಾರೆ.