ರಾಯ್ಪುರ: ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಮಹಿಳಾ ನಕ್ಸಲ್ ಬಲಿಯಾಗಿರುವ ಘಟನೆ ಚತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.
ದಬ್ಬಾಕೊಂಟಾ ಗ್ರಾಮದಲ್ಲಿ ಇಂದು ಕಮ್ಯಾಂಡೋ ಬೆಟಾಲಿಯನ್ ಫಾರ್ ರಿಸೊಲ್ಯೂಟ್ ಆ್ಯಕ್ಷನ್, ಸ್ಪೆಷಲ್ ಟಾಸ್ಕ್ ಫೋರ್ಸ್ ಹಾಗೂ ಡಿಸ್ಟ್ರಿಕ್ ರಿಸರ್ವ್ ಗಾರ್ಡ್ ಜಂಟಿ ಕಾರ್ಯಾಚರಣೆ ನಡೆಸಿದವು.
ಗ್ರಾಮದಲ್ಲಿ ನಕ್ಸಲರು ಬಿಡಾರ ಹೂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು, ಭದ್ರತಾ ಪಡೆ ದಾಳಿ ನಡೆಸಿತು. ಇತ್ತ ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆ, ನಕ್ಸಲರು ಸಹ ಪ್ರತಿ ದಾಳಿ ನಡೆಸಿದ್ದರು. ಬಳಿಕ ಕಾಡಿನೊಳಗೆ ನುಸುಳಿ, ಪರಾರಿಯಾದರು ಎಂದು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಸುಂದರರಾಜ್ ಪಿ. ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ನಕ್ಸಲರ ಉಡುಪು ಧರಿಸಿದ ಮಹಿಳೆಯ ಶವ ಪತ್ತೆಯಾಯ್ತು. ಆಕೆಯ ಬಳಿಯಿದ್ದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ರಕ್ತದ ಗುರುತುಗಳನ್ನು ಪತ್ತೆ ಮಾಡಿದಾಗ ಮತ್ತಷ್ಟು ನಕ್ಸಲರು ಗಾಯಗೊಂಡಿರುವ ಇಲ್ಲವೇ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದರು.
ನಕ್ಸಲರು ಬಳಸುತ್ತಿದ್ದ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಸುಂದರ್ ರಾಜ್ ಮಾಹಿತಿ ನೀಡಿದ್ದಾರೆ.