ಮಥುರಾ: ರಸ್ತೆ ಬದಿಯ ಕಲ್ಯಾಣ ಮಂಟಪವೊಂದರಲ್ಲಿ 36 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ನಡೆದಿದ್ದೇನು?
ಕುಟುಂಬವೊಂದು ಭರತ್ಪುರ್ಗೆ ತೆರಳುತ್ತಿದ್ದಾಗ ಸುಮಾರು ರಾತ್ರಿ 9 ಗಂಟೆಗೆ ಮಥುರಾ ಹೊರವಲಯದಲ್ಲಿ ಕಾರು ಕೆಟ್ಟಿದೆ. ಕಾರು ಕೆಟ್ಟಿದ್ದರಿಂದ ಆ ಕುಟುಂಬ ಸಮೀಪದ ಸೈನಿ ಸೇವಾ ಸದನ್ ಕಲ್ಯಾಣ ಮಂಟಪಕ್ಕೆ ತೆರಳಿ ಬಾಡಿಗೆಗೆ ರೂಂವೊಂದನ್ನು ಪಡೆದಿದೆ.
ಮಧ್ಯರಾತ್ರಿ ಮಹಿಳೆಗೆ ಬಾಯಾರಿಕೆ ಆಗಿದೆ. ನೀರು ಕುಡಿಯಲು ರೂಂನಿಂದ ಹೊರ ಬಂದಿದ್ದಾಳೆ. ಈ ವೇಳೆ ಕಲ್ಯಾಣ ಮಂಟಪದ ಕೆಲಸಗಾರರಿಬ್ಬರು ಆಕೆಯನ್ನು ಮಾಳಿಗೆ ಮೇಲೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗ್ತಿದೆ.
ಅತ್ಯಾಚಾರದ ಬಗ್ಗೆ ಕುಟುಂಬಸ್ಥರು ಮಥುರಾ ಹೈವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಆದಷ್ಟು ಬೇಗ ಆ ಆರೋಪಿಯನ್ನು ಸೆರೆ ಹಿಡಿಯಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿ ಉದಯ್ ಶಂಕರ್ ಸಿಂಗ್ ಹೇಳಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.