ಕೋಲ್ಕತ್ತಾ: ಸರಿಸುಮಾರು 30 ವರ್ಷಗಳ ಕಾಲ ಮಹಿಳೆಯಾಗಿ ಜೀವನ ನಡೆಸಿದ್ದು, ಆದರೆ ಇದೀಗ ತಾನು ಮಹಿಳೆಯಲ್ಲ ಬದಲಿಗೆ ಪುರುಷ ಎಂಬ ಸತ್ಯಾಂಶ ಬಹಿರಂಗಗೊಂಡಿದೆ. ಇದು ವೈದ್ಯರಿಗೂ ಕೂಡ ಅಚ್ಚರಿ ಮೂಡಿಸಿದೆ. ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಭೀರ್ ಭೂಮಿಯಲ್ಲಿ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ 30 ವರ್ಷದ ಮಹಿಳೆಯೋರ್ವಳು ಆಸ್ಪತ್ರೆಗೆ ತೆರಳಿದ್ದಳು. ಈ ವೇಳೆ ಆಕೆಯಲ್ಲಿ ಟೆಸ್ಟಿಕ್ಯೂಲರ್ ಕ್ಯಾನ್ಸರ್ ಇದೆ ಎಂಬುದು ಗೊತ್ತಾಗಿದೆ. ಆದರೆ, ಅದು ಕಾಣಿಸಿಕೊಳ್ಳುವುದು ಪುರುಷರಲ್ಲಿ ಮಾತ್ರ ಎಂಬುದನ್ನ ವೈದ್ಯರು ತಿಳಿಸಿದ್ದಾರೆ. ಜತೆಗೆ ಆಕೆಯ ಹುಟ್ಟಿನಿಂದಲೇ ಗಂಡು ಎಂಬ ಆಶ್ಚರ್ಯಕರ ಮಾಹಿತಿಯನ್ನೂ ಹೊರಹಾಕಿದ್ದಾರೆ.
ಹುಟ್ಟಿದಾಗಿನಿಂದಲೂ ಹೆಣ್ಣಿಗೆ ಇರಬೇಕಾದ ಉದ್ದನೆಯ ತಲೆ ಕೂದಲು, ಸ್ತನ ಹಾಗೂ ಮರ್ಮಾಂಗ ಆಕೆಯಲ್ಲಿದೆ. ಆದರೆ, ಗರ್ಭಾಶಯ ಮತ್ತು ಅಂಡಾಶಯಗಳು ಮಾತ್ರ ಇರಲಿಲ್ಲ. ವಿಶೇಷವೆಂದರೆ ಇಲ್ಲಿಯವರೆಗೆ ಆಕೆಗೆ ಋತುಸ್ರಾವವೇ ಆಗಿಲ್ಲ. ಕಳೆದ 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈಕೆಗೆ ಮಕ್ಕಳು ಕೂಡ ಹುಟ್ಟಿಲ್ಲ.
ಹೊಟ್ಟೆ ನೋವಿನ ಕಾರಣ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆಕೆಯನ್ನ ಪರೀಕ್ಷೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಇದೀಗ ಆಕೆಗೆ ಕೀಮೋ ಥೆರಪಿ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ವೈದ್ಯರು ತಿಳಿಸಿರುವ ಪ್ರಕಾರ ಪ್ರತಿ 22 ಸಾವಿರ ವ್ಯಕ್ತಿಗಳಲ್ಲಿ ಒಬ್ಬರಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.