ಹೈದರಾಬಾದ್: ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ರೋಗಿವೋರ್ವ ಮರದ ಕೆಳಗೆ ಕುಳಿತು ಹಸಿವಿನಿಂದ ಪರಿತಪಿಸುತ್ತಿದ್ದರು. ಅವರಿಗೆ ಯುವತಿವೋರ್ವಳು ಪೈಪ್ ಮೂಲಕ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾಳೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಮ್ಮಂ ಮೂಲದ ಬಡರೋಗಿಯು ಹೈದರಾಬಾದ್ನ ನಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ್ದರು. ಈ ವೇಳೆ ವೈದ್ಯರು ಸರಿಯಾಗಿ ಸ್ಪಂದಿಸಿಲ್ಲವೆಂಬ ಆರೋಪ ಕೇಳಿಬಂದಿದೆ. ಆ ವ್ಯಕ್ತಿ ವಿಧಿಯಿಲ್ಲದೆ ಮರದ ಕೆಳಗೆ ಅಸಹಾಯಕರಾಗಿ ಕುಳಿತಿದ್ದರು. ಅವರಿಗೆ ಯುವತಿವೋರ್ವಳು ಊಟ ನೀಡಿ ಆರೈಕೆ ಮಾಡಿದ್ದಾಳೆ.
ಆ ರೋಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇವರ ಈ ದಯನೀಯ ಸ್ಥಿತಿಯನ್ನು ಕಂಡ ಸಾರ್ವಜನಿಕರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ವೈದ್ಯರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆ ವೈದ್ಯರು, "ರೋಗಿಯ ಪರಿಸ್ಥಿತಿ ಗಂಭೀರವಾಗಿರದ ಹಿನ್ನೆಲೆಯಲ್ಲಿ ಹೊರರೋಗಿ ವಿಭಾಗಕ್ಕೆ ಭೇಟಿ ನೀಡಲು ಹೇಳಿದ್ದೆವು" ಎಂದಿದ್ದಾರೆ.