ಪಂಜಾಬ್: ತಲೆಗೆ ಮೂರು ಗುಂಡು ಹಾಗೂ ಮುಖಕ್ಕೆ ಒಂದು ಗುಂಡು ಹೊಕ್ಕರೂ ಸಾವು-ನೋವು ಬದುಕಿನ ನಡುವೆ ಹೋರಾಟ ನಡೆಸುತ್ತಲೇ ಮಹಿಳೆಯೊಬ್ಬರು 7 ಕಿಲೋಮೀಟರ್ ಚಲಿಸಿ ಪಂಜಾಬ್ನ ಮುಕ್ತಸಾರ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆ ಸುಮಿತ್ ಕೌರ್ (46) ಜಮೀನು ಕಸಿದುಕೊಂಡಿರುವ ಪ್ರಕರಣದಡಿ ಸಹೋದರ ಮತ್ತು ಸೋದರಳಿಯನ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆಯ ಸೋದರಳಿಯ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದಾನೆ. ಮುಕ್ತಸರ್‌ನ ಸಮೇವಾಲಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಭೂ ವಿವಾದದಲ್ಲಿ ಸಹೋದರನೊಂದಿಗೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಸುಮಿತ್ ಮತ್ತು ತಾಯಿ ಸುಖಜಿಂದರ್ ಕೌರ್ಗೆ (65) ಗುಂಡು ಹಾರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು. ಗುಂಡು ಹಾರಿಸಿದ ಸಂದರ್ಭದಲ್ಲಿ ಸುಖಜಿಂದರ್ ಕಾಲಿಗೆ 2 ಗುಂಡು ತಾಗಿವೆ.
ತಲೆಗೆ ಮತ್ತು ಮುಖಕ್ಕೆ ಸೇರಿ ನಾಲ್ಕು ಗುಂಡುಗಳು ತಾಗಿದ್ದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಬಳಿಕ ಆಸ್ಪತ್ರೆಗೆ ತೆರಳಿ ಬುಲೆಟ್ ತೆಗೆಸಿದ್ದಾರೆ. ಸದ್ಯ ಸುಮಿತ್ ಕೌರ್ ಮತ್ತು ಆಕೆ ತಾಯಿ ಕ್ಷೇಮವಾಗಿದ್ದಾರೆ.
ವೈದ್ಯರು ಹೇಳಿದ್ದೇನು?: ವೈದ್ಯ ಮುಕೇಶ್ ಬನ್ಸಾಲ್ ಮಾತನಾಡಿ, ತಲೆಯಲ್ಲಿ ಗುಂಡು ತಾಗಿದ್ದರೂ ಜೀವಂತವಾಗಿರುವುದನ್ನು ನೋಡಿ ಆಶ್ಚರ್ಯವಾಯಿತು. ಗುಂಡು ಮೆದುಳಿಗೆ ಪ್ರವೇಶಿಸದ ಕಾರಣ ಆಕೆ ಬದುಕುಳಿದಿದ್ದಾರೆ ಎಂದರು.
ಪ್ರಕರಣ ಏನು?: ನಾವು 40 ಎಕರೆ ಜಮೀನು ಹೊಂದಿದ್ದೇವೆ. ತಂದೆ ನಿಧನದ ನಂತರ ನನಗೆ, ತಾಯಿಗೆ ಮತ್ತು ನನ್ನ ಸಹೋದರನಿಗೆ ಹಂಚಿಕೆ ಮಾಡಲಾಯಿತು. 40 ಎಕರೆಯಲ್ಲಿ 16 ಎಕರೆ ನಾನು ಪಡೆದಿದ್ದೇನೆ. ಉಳಿದಿದ್ದನ್ನು ಸಹೋದರನಿಗೆ ನೀಡಲಾಗಿದೆ. ಆದರೂ ನನಗೆ ನೀಡಿರುವ ಪಾಲನ್ನು ಕಸಿದುಕೊಳ್ಳಲು ಮುಂದಾಗುತ್ತಿದ್ದಾರೆ. ಅದಕ್ಕಾಗಿ ನಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೂ ಮೊದಲೂ ಎಷ್ಟೋ ಸಾರಿ ಹಲ್ಲೆ ಮಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಹೋದರ ಹರಿಂದರ್ ಸಿಂಗ್ ಮತ್ತು ಸೋದರಳಿಯನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.