ಅಮರಾವತಿ: ಆಂಧ್ರಪ್ರದೇಶ ಚುನಾವಣೆಯಲ್ಲಿ ಮಹತ್ವದ ಗೆಲವು ದಾಖಲಿಸಿ, ಸಿಎಂ ಪಟ್ಟಕ್ಕೇರಿದ ವೈಎಸ್ ಜಗನ್ಮೋಹನ್ ರೆಡ್ಡಿ ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದಾರೆ. ಭಾರತದಲ್ಲಿ ಇದೇ ಮೊದಲೆಂಬಂತೆ, ಐವರು ಉಪ ಮುಖ್ಯಮಂತ್ರಿಗಳನ್ನು ತಮ್ಮ ಸಂಪುಟಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ.
ಜಗನ್, ಅಮರಾವತಿಯ ತದೇಪಲ್ಲಿಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ವೈಎಸ್ಆರ್ ಕಾಂಗ್ರೆಸ್ ಶಾಸಕಾಂಕ ಪಕ್ಷದ ಸಭೆ ನಡೆಸಿದರು. 25 ಸಚಿವರುಳ್ಳ ಪರಿಪೂರ್ಣ ಸಂಪುಟವನ್ನೇ ರಚಿಸಲಾಗಿದ್ದು, ನಾಳೆ ಎಲ್ಲರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗ, ಅಲ್ಪಂಸಂಖ್ಯಾತರು ಮತ್ತು ಕಾಪು ಸಮುದಾಯ ಸೇರಿದಂತೆ ಎಲ್ಲರನ್ನು ಪ್ರತಿನಿಧಿಸುವ ಐವರು ಉಪಮುಖ್ಯಮಂತ್ರಿಗಳೂ ಇದ್ದಾರೆ ಎಂದು ಜಗನ್ ಹೇಳಿದರು.
ಸಾಮಾಜಿಕ ನ್ಯಾಯದ ಉದ್ದೇಶದಿಂದ ತಮ್ಮ ಸಂಪುಟದಲ್ಲಿ ಶೇ. 50ರಷ್ಟು ಎಲ್ಲ ಸಮುದಾಯದ ಸಚಿವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಸಚಿವರ ಹೆಸರನ್ನು ಬಹಿರಂಗ ಪಡಿಸಲಿಲ್ಲ. ಇಂದು ಸಂಜೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ. ವಿಜಯ್ ಸಾಯಿ ರೆಡ್ಡಿ ಸಚಿವ ಸ್ಥಾನಕ್ಕೆ ಆಯ್ಕೆಯಾದವರನ್ನು ಸಂಪರ್ಕಿಸಿ ಮಾಹಿತಿ ನೀಡ್ತಾರೆ ಎಂದರು.
ಮತ್ತೊಂದು ಮಹತ್ವದ ನಿರ್ಧಾರವನ್ನು ಮೊದಲೇ ಪ್ರಕಟಿಸಿರುವ ಜಗನ್, ಸಂಪುಟ ಶೇ 90ರಷ್ಟು ಸಚಿವರ ಅಧಿಕಾರಾವಧಿ ಎರಡೂವರೆ ವರ್ಷ ಮಾತ್ರ. ಆನಂತರ ಹೊಸಬರು ಆ ಸ್ಥಾನಗಳನ್ನು ಅಲಂಕರಿಸ್ತಾರೆ ಎಂದಿದ್ದಾರೆ.
ಐವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಜಗನ್ರ ಐಡಿಯಾ ದೇಶದಲ್ಲಿ ಈ ಹಿಂದೆ ಎಂದೂ ಆಗಿಲ್ಲ. ಕಳೆದ ಅವಧಿಯಲ್ಲಿ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಿದ್ದರು.