ನವದೆಹಲಿ: ಮಾ. 24ರಂದು ದೇಶದಲ್ಲಿ ಎರಡನೇ ಹಂತದ ಕರ್ಫ್ಯೂ ವಿಸ್ತರಣೆಗೊಳ್ಳದೆ ಇದ್ದಿದ್ದರೆ ದೇಶದ ಪರಿಸ್ಥಿತಿ ಇದೀಗ ಭೀಕರವಾಗಿರುತ್ತಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಲಾಕ್ಡೌನ್ ವಿಸ್ತರಣೆ ಮಾಡದೇ ಹೋಗಿದ್ರೆ ಕೊರೊನಾ ವಿರುದ್ಧ ಹೋರಾಟ ನಡೆಸಲು ನಮ್ಮ ಬಳಿ ಅಗತ್ಯ ಸೌಲಭ್ಯಗಳಿರಲಿಲ್ಲ. ಜನರು ಅದಕ್ಕೆ ತಯಾರು ಇರಲಿಲ್ಲ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇರಲಿಲ್ಲ ಎಂದಿದ್ದಾರೆ.
ದೆಹಲಿಯಲ್ಲಿ ಹೇರಿಕೆ ಮಾಡಲಾಗಿರುವ ಲಾಕ್ಡೌನ್ ಕೆಲವೊಂದು ಷರತ್ತುಗಳೊಂದಿಗೆ ಸಡಿಲಗೊಳಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ನಿರ್ಧಾರ ಮಾಡಿದ್ದು, ನಾಳೆಯಿಂದ ಎಲ್ಲಾ ಕಚೇರಿಗಳಲ್ಲಿ ಶೇ. 50ರಷ್ಟು ಕಾರ್ಮಿಕರು ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿರುವ ಖಾಸಗಿ ಕಂಪನಿಗಳಲ್ಲಿ ಶೇ. 33ರಷ್ಟು ಸಿಬ್ಬಂದಿ ಕೆಲಸಕ್ಕೆ ಅನುಮತಿ ನೀಡಲಾಗಿದ್ದು, ಕೊರೊನಾ ವೈರಸ್ ಜತೆ ಹೋರಾಟ ನಡೆಸಲು ನಾವು ಸಿದ್ಧರಾಗಿದ್ದೇವೆ. ದೆಹಲಿ ಸಂಪೂರ್ಣವಾಗಿ ರೆಡ್ ಝೋನ್ನಲ್ಲಿದೆ. ಆದರೆ ಇದರಿಂದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಂಠಿತಗೊಳ್ಳಲಿರುವ ಕಾರಣ ಕೆಲವೊಂದು ಷರತ್ತುಗಳೊಂದಿಗೆ ನಾವು ಲಾಕ್ಡೌನ್ ಸಡಿಲಗೊಳಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಇಲ್ಲಿಯವರೆಗೆ 4,122 ಪ್ರಕರಣ ಕಂಡು ಬಂದಿದ್ದು, 1,256 ಜನರು ಗುಣಮುಖರಾಗಿದ್ದಾರೆ. ಜೊತೆಗೆ 64 ಜನರು ಸಾವನ್ನಪ್ಪಿದ್ದಾರೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಎಲ್ಲಾ ಝೋನ್ಗಳಲ್ಲೂ ಲಾಕ್ಡೌನ್ ಸಡಿಲಗೊಳ್ಳಲಿದ್ದು, ಕೆಲವೊಂದು ಮಾರ್ಗಸೂಚಿ ಪಾಲನೆ ಮಾಡುವುದು ಅತಿ ಅವಶ್ಯಕವಾಗಿದೆ ಎಂದು ಹೇಳಿದರು.
ರೆಡ್, ಗ್ರೀನ್ ಹಾಗೂ ಆರೆಂಜ್ ಝೋನ್ಗಳಲ್ಲಿ ಸಮ ಸಂಖ್ಯೆ ಹಾಗೂ ಬೆಸ ಸಂಖ್ಯೆ ಆಧಾರದ ಮೇಲೆ ಅಂಗಡಿ ಓಪನ್ ಮಾಡಲು ತಿಳಿಸಲಾಗಿದ್ದು, ಲಾಕ್ಡೌನ್ ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಕೂಡ ಇದು ಮುಂದುವರಿಯಲಿದೆ ಎಂದಿದ್ದಾರೆ. ಸರ್ಕಾರಿ ಬಸ್ ಸಂಚಾರ ಬಂದ್ ಇರಲಿದ್ದು, ಖಾಸಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುವುದು. ಕಾರ್ಗಳು ಮಾತ್ರ ರೋಡ್ಗೆ ಇಳಿಯಲಿವೆ ಎಂದು ಅವರು ತಿಳಿಸಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ 50 ಜನರು ಭಾಗಿಯಾಗಲು ಅವಕಾಶ ನೀಡಲಾಗುವುದು ಎಂದಿರುವ ಕೇಜ್ರಿವಾಲ್, 20 ಜನರು ಮಾತ್ರ ಅಂತ್ಯಕ್ರಿಯೆಗಳಲ್ಲಿ ಭಾಗಿಯಾಗಬೇಕು ಎಂದಿದ್ದಾರೆ.