ನವದೆಹಲಿ: ಮಹಿಳೆಯೊಬ್ಬಳು ಸಹೋದರನಿಗೆ ರಾಖಿ ಕಟ್ಟಲು ತವರು ಮನೆಗೆ ಹೋಗಿ ವಾಪಸ್ ಬರುವುದರೊಳಗೆ ಆಕೆಯ ಪತಿ ಇನ್ನೊಂದು ಮದುವೆಯಾಗಿರುವ ಘಟನೆ ನಗರದ ದಾಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನ ವಿರುದ್ಧ ನೊಂದ ಮಹಿಳೆಯು ಪೊಲೀಸ್ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.
18 ವರ್ಷದ ಹಿಂದೆ ವಿವಾಹವಾಗಿದ್ದ ಸುನಿತಾ ಎಂಬ ಮಹಿಳೆ ರಕ್ಷಾ ಬಂಧನ ಪ್ರಯುಕ್ತ ತನ್ನ ಸಹೋದರನಿಗೆ ರಾಖಿ ಕಟ್ಟಲು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಉತ್ತರ ಪ್ರದೇಶದ ಬಾದೂನ್ನಲ್ಲಿರುವ ತವರು ಮನೆಗೆ ತೆರಳಿದ್ದಳು. ಆಕೆ ಹಿಂದಿರುಗಿ ಬಂದಾಗ ಮನೆಯಲ್ಲಿ ಗಂಡನೊಂದಿಗೆ ಇನ್ನೊಬ್ಬ ಮಹಿಳೆಯಿದ್ದಳು. ಆಕೆಯ ಬಗ್ಗೆ ವಿಚಾರಿಸಿದಾಗ, ಈಕೆ ನನ್ನ ಎರಡನೇ ಪತ್ನಿ ಎಂದು ಗಂಡ ಹೇಳಿದ್ದ. ಅಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳಿಗೆ ಮನೆ ಬಿಟ್ಟು ಹೋಗುವಂತೆ ಹೇಳಿದ್ದನಂತೆ.
ಪೊಲೀಸರ ವಿರುದ್ಧ ಆರೋಪ:
ಗಂಡ ಎರಡನೇ ಮದುವೆಯಾಗಿ ಮೋಸ ಮಾಡಿರುವ ಬಗ್ಗೆ ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದೇನೆ. ಆದರೆ, ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುನಿತಾ ಆರೋಪಿಸಿದ್ದಾಳೆ. ಈ ನಡುವೆ ಪತ್ನಿಯ ವಿರುದ್ಧ ಈ ಮೊದಲೇ ನಾನು ಪೊಲೀಸರಿಗೆ ದೂರು ನೀಡಿದ್ದೆ ಎಂದು ಸುನಿತಾಳ ಪತಿ ಹೇಳಿದ್ದಾನೆ.