ನವದೆಹಲಿ: ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲನೇ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಯಾರಾಗುತ್ತಿದ್ದು, ಈ ಕುರಿತು ಮಾರುಕಟ್ಟೆಯಲ್ಲಿ ಯಾವೆಲ್ಲಾ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಇಲ್ಲಿದೆ.
ವೈಯಕ್ತಿಕ ತೆರಿಗೆ: ಪ್ರಸ್ತುತ ಜಾರಿಯಲ್ಲಿರುವ 2.5 ಲಕ್ಷ ತೆರಿಗೆ ವಿನಾಯಿತಿಯ ಮಿತಿಯನ್ನು ಹೆಚ್ಚಳಗೊಳಿಸುವ ಹಾಗೂ 10 ಕೋಟಿಗಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇಕಡಾ 40ರಷ್ಟು ಅಧಿಕ ತೆರಿಗೆ ಹೇರುವ ನಿರೀಕ್ಷೆಯಿದೆ. ಕೆಲವು ವರದಿಗಳ ಪ್ರಕಾರ ಅನುವಂಶಿಕ ಸಂಪತ್ತುಗಳ ಮೇಲೆ ಅನುವಂಶಿಕ ಅಥವಾ ಎಸ್ಟೇಟ್ ಟ್ಯಾಕ್ಸ್ ಮರಳಿ ಜಾರಿಯಾಗುವ ಸಂಭವವಿದೆ (1985ರ ಮೊದಲು ಈ ತೆರಿಗೆಯನ್ನು ಸಂಗ್ರಹಿಸಲಾಗುತ್ತಿತ್ತು.)
ವಸತಿ ಪ್ರಯೋಜನಗಳು: ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪುನರುಜ್ಜೀವಗೊಳಿಸಲು ಹಾಗೂ ವಸತಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ, ಸ್ವಯಾರ್ಜಿತ ವಸತಿಯ ಮೇಲಿನ ಸಾಲದ ಬಡ್ಡಿಗೆ ಪ್ರಸ್ತುತ ನಿಗದಿಯಾಗಿರುವ 2 ಲಕ್ಷ ತೆರಿಗೆ ವಿನಾಯಿತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನೊಂದೆಡೆ ವಸತಿ ಸಾಲ ಮರುಪಾವತಿಯ ಮೇಲೆ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಸಂಭವವಿದೆ.
ಕಾರ್ಪೊರೇಟ್ ತೆರಿಗೆ: ಸರ್ಕಾರವು 2018ರಲ್ಲಿ 250 ಕೋಟಿಯಷ್ಟು ವಾರ್ಷಿಕ ಆದಾಯ ಹೊಂದಿದ್ದ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 30 ರಿಂದ ಶೇಕಡಾ 25ಕ್ಕೆ ಇಳಿಸಿತ್ತು. ಈ ಬಾರಿ ಸಣ್ಣ ಹಾಗೂ ಮಧ್ಯಮ ವ್ಯವಹಾರಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸುವ ನಿರೀಕ್ಷೆಯಿದೆ.
ಸರ್ಕಾರವು ಈ ಬಾರಿ ಹೈವೇ, ರೈಲ್ವೇ ಹಾಗೂ ಬಂದರುಗಳಿಗೆ 100 ಟ್ರಿಲಿಯನ್ನಷ್ಟು ಮೀಸಲಿರಿಸುವ ಸಾಧ್ಯತೆಯಿದೆ. ಹಣಕಾಸಿನ ಕೊರತೆಯ ಗುರಿಯನ್ನು ಜಿಡಿಪಿಯ ಶೇಕಡಾ 3.4ರಷ್ಟೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೆಲವರು ನಿರೀಕ್ಷಿಸುತ್ತದ್ದರೆ, ಇನ್ನು ಕೆಲವರು ಶೇಕಡಾ 3.5ಕ್ಕೆ ಏರಿಕೆಯಾಗುವ ಸಂಭವವಿದೆ ಅನ್ನುತ್ತಿದ್ದಾರೆ.