ಕೋಲ್ಕತ್ತಾ: ನನಗೆ ಕೊರೊನಾ ಬಂದ್ರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಅಪ್ಪಿಕೊಳ್ಳುವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾಗೆ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಫೇಸ್ಬುಕ್ನಲ್ಲಿ ಅವರು ಮಾಹಿತಿ ನೀಡಿದ್ದು, ಕೋಲ್ಕತ್ತಾದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ನಡೆದ ರ‍್ಯಾಲಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವತ್ತಾದರೂ ನನಗೆ ಕೋವಿಡ್ ಸೋಂಕು ತಗುಲಿದರೆ, ನಾನು ಮಮತಾ ಬ್ಯಾನರ್ಜಿ ಬಳಿ ಹೋಗಿ ಅವರನ್ನು ಅಪ್ಪಿಕೊಳ್ಳುವೆ. ಆಗ ಅವರಿಗೆ ಕೊರೊನಾದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು - ಆತ್ಮೀಯರನ್ನು ಕಳೆದುಕೊಂಡವರ, ಸೋಂಕಿಗೆ ಒಳಗಾದವರ ನೋವು ಅರ್ಥವಾಗುತ್ತದೆ ಎಂದಿದ್ದರು.
ಇದನ್ನೂ ಓದಿ: ನಂಗೆ ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುವೆ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
ಇವರ ಹೇಳಿಕೆ ಖಂಡಿಸಿ ಅನುಪಮ್ ಹಜ್ರಾ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿತ್ತು. ಇನ್ನು ಇವರು ಭಾಗಿಯಾಗಿದ್ದ ರ‍್ಯಾಲಿಯಲ್ಲಿ ಅನುಪಮ್ ಹಜ್ರಾ ಆಗಲಿ, ಇತರ ಬಿಜೆಪಿ ಕಾರ್ಯಕರ್ತರಾಗಲಿ ಮಾಸ್ಕ್ಗಳನ್ನ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.