ನವದೆಹಲಿ: ದೆಹಲಿಯಲ್ಲಿ ನಿನ್ನೆ ನಡೆದ ಟ್ರ್ಯಾಕ್ಟರ್ ಪರೇಡ್ ಹಿಂಸಾರೂಪ ಪಡೆದುಕೊಳ್ಳುತ್ತಿದ್ದಂತೆ ವಿವಿಧ ರೈತ ಸಂಘಟನೆಗಳ ಮಧ್ಯೆ ಬಿರುಕು ಉಂಟಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮುಖ್ಯಸ್ಥ ವಿ.ಎಂ.ಸಿಂಗ್, ಯಾವುದೇ ಕಾರಣಕ್ಕೂ ನಾವು ಪ್ರತಿಭಟನೆ ಮುಂದುವರೆಸಲ್ಲ. ಇನ್ನೊಬ್ಬರ ನಿರ್ದೇಶನದ ಮೇಲೆ ನಾವು ಪ್ರತಿಭಟನೆ ನಡೆಸುವುದಿಲ್ಲ ಎಂದು ಸುದ್ದಿಗೋಷ್ಠಿ ವೇಳೆ ತಿಳಿಸಿದರು. ಕಿಸಾನ್ ಆಂದೋಲನದಿಂದ ನಡೆಯುತ್ತಿರುವ ಪ್ರತಿಭಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ, ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತ್ರಿ ವಿಚಾರವಾಗಿ ನಮ್ಮ ಪ್ರತಿಭಟನೆ ಮುಂದುವರೆಯಲಿದ್ದು, ಮುಂದಿನ ಹೋರಾಟ ಹೊಸ ಸ್ವರೂಪದಲ್ಲಿರಲಿದೆ ಎಂದಿದ್ದಾರೆ.
ಇದರ ಬೆನ್ನಲ್ಲೇ ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಠಾಕೂರ್ ಭಾನುಪ್ರತಾಪ್ ಸಿಂಗ್, ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದ ಆಘಾತವಾಗಿದೆ. ಹೀಗಾಗಿ 58 ದಿನಗಳ ರೈತ ಪ್ರತಿಭಟನೆ ಸ್ಥಗಿತಗೊಳಿಸುತ್ತಿದ್ದೇವೆ ಎಂದರು.