ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ತುರ್ತು ಬಳಕೆ ಮಾಡಲು ಈಗಾಗಲೇ ಎರಡು ವ್ಯಾಕ್ಸಿನ್ಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲು ಎರಡು ಲಸಿಕೆಗಳಿಗೆ ಜನವರಿ 3ರಂದು ಅನುಮೋದನೆ ನೀಡಲಾಗಿದ್ದು, ಅಭ್ಯಾಸ ಹಂತದಲ್ಲಿನ ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ 10 ದಿನಗಳೊಳಗೆ ಕೋವಿಡ್-19 ಲಸಿಕೆ ಹೊರತರಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಮೊದಲ ಬಾರಿಗೆ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು, ಜೊತೆಗೆ ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು, ಅವಶ್ಯಕ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ತುರ್ತು ಬಳಕೆ ಮಾಡಲು ನೀಡಿರುವ ದಿನಾಂಕದಿಂದ ಮುಂದಿನ 10 ದಿನಗಳಲ್ಲಿ ಕೋವಿಡ್-19 ಲಸಿಕೆಗಳನ್ನು ನೀಡಲು ನಾವು ಸಿದ್ಧರಾಗಿದ್ದೇವೆ. ಈಗಾಗಲೇ ಎರಡು ಲಸಿಕೆಗಳಿಗೆ ಅನುಮೋದನೆ ದೊರತಿದೆ. ಪುಣೆ ಮೂಲದ ಸಿರಂ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಆಕ್ಸಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಈವರೆಗೆ 58 ಜನರಿಗೆ ರೂಪಾಂತರ ಕೊರೊನಾ ಸೋಂಕು ಕಂಡು ಬಂದಿದ್ದು, ಇದಕ್ಕೂ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದಿದ್ದಾರೆ.
ಓದಿ: ಲಸಿಕೆಗಳ ಮಹತ್ವದ ಬಗ್ಗೆ ಸಂಪೂರ್ಣ ಅರಿವಿದೆ: ಭಾರತ್ ಬಯೋಟೆಕ್-ಸೆರಂನಿಂದ ಜಂಟಿ ಹೇಳಿಕೆ!
ಆರಂಭಿಕವಾಗಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಿಗೆ ಈ ಲಸಿಕೆ ನೀಡಲಾಗುವುದು ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಈ ಲಸಿಕೆ ಪಡೆದುಕೊಳ್ಳಲು ಅವರು ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ನಾಲ್ಕು ಪ್ರಾಥಮಿಕ ಲಸಿಕೆ ಮಳಿಗೆಗಳನ್ನು ಕರ್ನೂಲ್, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸ್ಥಾಪಿಸಲಾಗಿದ್ದು, ದೇಶದಲ್ಲಿ ಒಟ್ಟು 37 ಲಸಿಕೆ ಮಳಿಗೆಗಳಿವೆ ಎಂದು ಅವರು ಹೇಳಿದ್ದಾರೆ.