ವಿಜೋಯನಗರ (ಅರುಣಾಚಲ ಪ್ರದೇಶ): ಅನಾರೋಗ್ಯಪೀಡಿತ ತಾಯಿಯನ್ನು ವ್ಯಕ್ತಿಯೋರ್ವ ಗ್ರಾಮಸ್ಥರ ಸಹಾಯದಿಂದ ಸುಮಾರು 200 ದೂರದ ಆಸ್ಪತ್ರೆಗೆ ಸೇರಿಸಿದ ಘಟನೆ ಅರುಣಾಚಲ ಪ್ರದೇಶದ ವಿಜೋಯನಗರ ಬಳಿಯ ಗಾಂಧಿ ಗ್ರಾಮದಲ್ಲಿ ನಡೆದಿದೆ.
ಸಯೆದೆ ಎಂಬ ಯುಬಿ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಕ ತನ್ನ ಶ್ರಮದಿಂದ ಹಾಗೂ ಗ್ರಾಮಸ್ಥರ ಸಹಾಯದಿಂದ ಮರದಿಂದ ಮಾಡಿದ ಸಾಮಗ್ರಿಯೊಂದರಿಂದ 200 ಕಿಲೋ ಮೀಟರ್ ದೂರಲ್ಲಿರುವ ಮಯು ಪಟ್ಟಣದಲ್ಲಿರುವ ಆಸ್ಪತ್ರೆಗೆ ತನ್ನ ತಾಯಿಯನ್ನು ದಾಖಲಿಸಿದ್ದಾನೆ.
2017ರಲ್ಲಿ ಆತನ ತಾಯಿ ವಿದ್ಯುತ್ ಶಾಕ್ಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದಳು. ಈ ವರ್ಷದ ಆಗಸ್ಟ್ ತಿಂಗಳಿಂದ ಆಕೆಯ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಂಚದ ರೀತಿಯ ಸಾಧನವೊಂದನ್ನು ತಯಾರಿಸಿದ ಆತ ಗ್ರಾಮಸ್ಥರ ಸಹಾಯದಿಂದ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾನೆ.
ಆಗಸ್ಟ್ 31ರಂದು ಆರಂಭವಾದ ಪ್ರಯಾಣ ಸೆಪ್ಟೆಂಬರ್ 4ರಂದು ಮಯು ಆಸ್ಪತ್ರೆಗೆ ತಾಯಿಯನ್ನು ದಾಖಲಿಸುವುದರೊಂದಿಗೆ ಅಂತ್ಯಗೊಂಡಿದೆ. ಸುಮಾರು 5 ದಿನಗಳ ಕಾಲ ಪ್ರಯಾಣ ಮಾಡಲಾಗಿದೆ.
ಇವರು ವಾಸಿಸುವ ಗ್ರಾಮಕ್ಕೆ ಯಾವುದೇ ರೀತಿಯ ರಸ್ತೆ ಸೌಕರ್ಯವಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಫೆಬ್ರವರಿ 2013ರಲ್ಲಿ ಮಯುವನ್ನು ವಿಜಯನಗರದೊಂದಿಗೆ ಸಂಪರ್ಕಿಸಲು 157 ಕಿಲೋ ಮೀಟರ್ ರಸ್ತೆಯ ಯೋಜನೆ ರೂಪಿಸಲಾಗಿದ್ದರೂ ಈವರೆಗೆ ಕೇವಲ 10 ಕಿಲೋ ಮೀಟರ್ ಮಾತ್ರ ಪೂರ್ಣಗೊಂಡಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.