ಹೈದರಾಬಾದ್: ರಾಸಾಯನಿಕ ಅನಿಲ ಸೋರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಶಾಖಪಟ್ಟಣಂನ ಎಲ್‌ಜಿ ಪಾಲಿಮರ್ಸ್ ಸಂಸ್ಥೆಯನ್ನು ಸೀಜ್ ಮಾಡುವಂತೆ ಆಂಧ್ರಪ್ರದೇಶ ಹೈಕೋರ್ಟ್ ಆದೇಶಿಸಿದೆ.
ಕಂಪನಿಯನ್ನು ಸಂಪೂರ್ಣವಾಗಿ ಸೀಜ್ ಮಾಡಿ, ಕಂಪನಿಯ ನಿರ್ದೇಶಕರು ಸೇರಿದಂತೆ ಯಾರಿಗೂ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಜಿಂದೇಂದ್ರ ಕುಮಾರ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಲಲಿತಾ ಕಣ್ಣೇಗಂಟಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕಂಪೆನಿಯ ಆವರಣದಿಂದ ಯಾವುದೇ ವಸ್ತುಗಳು ಹಾಗೂ ಯಂತ್ರೋಪಕರಣಗಳನ್ನು ಬೇರೆಡೆ ಸಾಗಿಸುವಂತಿಲ್ಲ ಎಂದು ಹೇಳಿದೆ.
ಪರಿಶೀಲನೆಗೆ ತೆರಳುವ ಸಮಿತಿಗಳು ಆವರಣದ ಒಳಗೆ ಹೋಗುವುದರ ಕುರಿತು ಹಾಗೂ ಅಲ್ಲಿ ಮಾಡಿದ ಕೆಲಸಗಳ ಕುರಿತು ರಿಜಿಸ್ಟರ್‌ನಲ್ಲಿ ಬರೆದಿಡಬೇಕು ಎಂದು ಆದೇಶ ನೀಡಿದೆ.