ಕಟಕ್: ಒಡಿಶಾದ ಕಟಕ್ ನಗರದ ಕೇಶರ್‌ಪುರ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.
ಪೊಲೀಸರು ಯುವಕರನ್ನು ತಮ್ಮ ಮನೆಗಳಿಗೆ ಹಿಂತಿರುಗಲು ಹೇಳಿದಾಗ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಕೆಲ ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದಾರೆ.
48 ಗಂಟೆಗಳ ನಿರ್ಬಂಧ ಆದೇಶವನ್ನು ಉಲ್ಲಂಘಿಸಿ ಕಟಕ್ ನಗರದಲ್ಲಿ ಕೆಲ ಯುವಕರ ತಂಡವು ಬೆಳಿಗ್ಗೆ ಮಸೀದಿಯ ಬಳಿ ಜಮಾಯಿಸಿರುವುದನ್ನು ಮಂಗಲಭಾಗ್ ಠಾಣೆಯ ಗಸ್ತು ತಂಡವೊಂದು ಕಂಡುಹಿಡಿದಿದೆ.
ಘಟನೆಯಲ್ಲಿ ಮಂಗಲಭಾಗ್ ಐಐಸಿ ಮತ್ತು ಇತರ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಈ ಸಂಬಂಧ ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಘಟನೆಯ ದೃಶ್ಯಗಳನ್ನಾಧರಿಸಿ ಆರೋಪಿಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಕಟಕ್ ಡಿಸಿಪಿ ಅಖಿಲೇಶ್ವರ ಸಿಂಗ್ ಹೇಳಿದ್ದಾರೆ.