ಭಿಂದ್(ಮಧ್ಯ ಪ್ರದೇಶ): ಕಠಿಣ ಪರಿಶ್ರಮದ ಫಲ ತುಂಬಾ ಸಿಹಿಯಾಗಿರುತ್ತದೆ ಎಂಬ ಹಿರಿಯರ ಮಾತು ತುಂಬಾ ಅರ್ಥಪೂರ್ಣ. ಇದಕ್ಕೆ ಈ ಬಾಲಕಿ ಸಾಕ್ಷಿ. ಪ್ರತಿನಿತ್ಯ ಬರೋಬ್ಬರಿ 24 ಕಿ.ಮೀ ದೂರ ಸೈಕಲ್ನಲ್ಲಿ ಶಾಲೆಗೆ ಹೋಗಿ ಕಷ್ಟಪಟ್ಟು ಓದಿದ ಈ ಬಾಲಕಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದಾಳೆ.
ಈ ಬಾಲಕಿ ಹೆಸರು ರೋಶ್ನಿ ಭದೌರಿಯಾ. ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಮೆಹಗಾಂವ್ ಎಂಬ ಸಣ್ಣ ಪಟ್ಟಣದ ಅಜ್ನಾಲ್ ಗ್ರಾಮದ ಬಾಲಕಿ. ಸದ್ಯ ಇದೇ ಗ್ರಾಮದ 15 ವರ್ಷದ ಬಾಲಕಿ ತನ್ನ ಹೆಸರಿನ ಜೊತೆಗೆ ತನ್ನ ಹೆತ್ತವರು, ಗ್ರಾಮ ಹಾಗೂ ತನ್ನ ಜಿಲ್ಲೆಯ ಹೆಸರನ್ನೇ ರಾಜ್ಯ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾಳೆ.
ಮಧ್ಯಪ್ರದೇಶ ಹೈಸ್ಕೂಲ್ ಬೋರ್ಡ್ ಪರೀಕ್ಷೆಯಲ್ಲಿ 98.5% ಅಂಕ ಗಳಿಸಿ, ರಾಜ್ಯಕ್ಕೆ 8ನೇ ಸ್ಥಾನ ಪಡೆಯುವ ಮೂಲಕ ಹಳ್ಳಿ ಹುಡುಗಿ ದೊಡ್ಡ ಸಾಧನೆ ಮಾಡಿದ್ದಾಳೆ. ಇದಕ್ಕೆ ಕಾರಣ ಆಕೆಯ ನಿರಂತರ ಪ್ರಯತ್ನ. ಪ್ರತಿನಿತ್ಯ ಶಾಲೆಗಾಗಿ 24 ಕಿ.ಮೀ ದೂರದ ಮೆಹಗಾಂವ್ನಲ್ಲಿರುವ ಪಟ್ಟಣಕ್ಕೆ ಬೈಸಿಕಲ್ನಲ್ಲಿ ಸಾಗುತ್ತಿದ್ದಳು. ಆಕೆಗೆ ಕಲಿಕೆಯ ಬಗೆಗಿರುವ ಆಸಕ್ತಿ ಎಷ್ಟಿತ್ತು ಎಂಬುದು ಇದರಲ್ಲೇ ಸ್ಪಷ್ಟವಾಗುತ್ತದೆ. ದೂರದ ಊರಿಗೆ ಕಲಿಯಲು ಪ್ರತಿನಿತ್ಯ ಹೋಗಿ ಬಂದು ಮನೆಯಲ್ಲೇ ಪ್ರತಿದಿನ 4 ರಿಂದ 5 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದಳು. ಐಎಎಸ್ ಅಧಿಕಾರಿಯಾಗುವ ಮೂಲಕ ದೇಶ ಸೇವೆ ಮಾಡುವ ಕನಸನ್ನು ಕಂಡಿರುವ ಈ ಬಾಲಕಿ, ತನ್ನ ಕನಸ್ಸಿಗೆ ರೆಕ್ಕೆ ಕಟ್ಟಿ ಹಾರುವ ಪ್ರಯತ್ನದಲ್ಲಿ ಎಡವಿ ಬಿದ್ದಿಲ್ಲ. ಮಗಳ ಮಹದಾಸೆಗೆ ಬೆಂಬಲ ನೀಡಿ ಬೆನ್ನು ತಟ್ಟಿ ನಿಂತ ಹೆತ್ತವರು, ಆಕೆಯ ಕನಸಿಗೆ ಬಣ್ಣ ತುಂಬಲು ಸಾಧ್ಯವಾಗದಿದ್ದರೂ, ಕನಸಿನೊಂದಿಗೆ ಪಾಲುದಾರರಾಗಿ ಮಗಳಿಗೆ ಸಾಥ್ ನೀಡಿದ್ರು.
ರೋಶ್ನಿ ತಂದೆ ಪುರುಷೋತ್ತಮ್ ಭದೌರಿಯಾ, ಓರ್ವ ಬಡ ರೈತ. ತಾಯಿ ಸರಿತಾ ಭದೌರಿಯಾ ವಿದ್ಯಾವಂತೆಯಾಗಿದ್ದರೂ ತನ್ನ ಜೀವನದಲ್ಲಿ ಯಾವುದೇ ಸಾಧನೆ ಮಾಡಲಾಗಿಲ್ಲ ಎಂಬ ಕೊರಗು ಅವರಿಗೆ ಕಾಡುತ್ತಿತ್ತು. ಹೀಗಾಗಿ ತಮ್ಮ ಮಗಳು ಏನಾದರೂ ಸಾಧನೆ ಮಾಡಬೇಕೆಂದು ಮಗಳಿಗೆ ನಿರಂತರ ಪ್ರೋತ್ಸಾಹ ನೀಡಿದರು. ಮಗಳು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿಗೆ ಈಗ ತಂದೆ-ತಾಯಿ ಮಾತ್ರವಲ್ಲದೆ ಇಡೀ ಊರಿಗೆ ಊರೇ ಬೆಂಬಲ ನೀಡುತ್ತಿದೆ. ಬಾಲಕಿ ಕಠಿಣ ಪ್ರಯತ್ನಕ್ಕೆ ಉತ್ತಮ ಫಲವೂ ಸಿಕ್ಕಂತಾಗಿದೆ.