ಜಂಗರೆಡ್ಡಿಗುಡೆಮ್ (ಆಂಧ್ರ ಪ್ರದೇಶ) : ಚಿವ್ಗುಟ್ಟುವ ಪುಟ್ಟ ಪುಟ್ಟ ಗುಬ್ಬಚ್ಚಿಗಳ ಲೋಕವನ್ನೇ ನಿರ್ಮಿಸಿದ್ದಾರೆ ಈ ಪಕ್ಷಿ ಪ್ರೇಮಿ ಮಹೇಶ್. ಬಾಲ್ಯದಿಂದಲೇ ಮನೆಯ ಮೇಲ್ಛಾವಣಿಯ ಮೇಲೆ ಗುಬ್ಬಚ್ಚಿ ಸೇರಿದಂತೆ ಅನೇಖ ಪಕ್ಷಿಗಳು ಗೂಡು ಕಟ್ಟುವುದನ್ನು ಇವರು ಇಷ್ಟಪಡುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ಪಕ್ಷಿಗಳಂದರೆ ಪ್ರೀತಿ. ಇತ್ತಿಚಿನ ದಿನಗಳಲ್ಲಿ ಗುಬ್ಬಚ್ಚಿಗಳ ಅವನತಿ ಕಂಡು ನಿರಾಸೆಗೊಂಡ ಇವರು ಹೊಸ ಯೋಜನೆಯೊಂದನ್ನು ರೂಪಿಸಿದರು. ಪ್ರಸ್ತುತ ಖಾಸಗಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಆಂಧ್ರ ಪ್ರದೇಶದ ಜಂಗರೆಡ್ಡಿಗುಡೆಮ್ ನಿವಾಸಿಯಾದ ಇವರು ‘ಸ್ಪ್ಯಾರೋ-ಟೌನ್’ ನಿರ್ಮಿಸಿದ್ದಾರೆ.
ಕೃತಕ ಆವಾಸ ಸ್ಥಾನಗಳನ್ನು ಪೂರೈಸುವ ಮೊದಲು, ಮಹೇಶ್ ಪ್ರತಿ ಮನೆ ಮಾಲೀಕರಿಂದ ಲಿಖಿತ ಅನುಮತಿ ಪಡೆಯುತ್ತಾರೆ. ಬಳಿಕ ಕಾಲಕಾಲಕ್ಕೆ ಮನೆಗಳಿಗೆ ಭೇಟಿನೀಡಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಪಕ್ಷೀಗಳು ಹೇಗಿವೆ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಾರೆ. ಇದುವರೆಗೂ 400 ಕ್ಕೂ ಹೆಚ್ಚು ಗೂಡುಗಳನ್ನು ವಿತರಿಸಿದ್ದಾರೆ. ಗುಬ್ಬಚ್ಚಿಗಳು ಈ ಮರದ ರಚನೆಯನ್ನು ತಮ್ಮ ವಾಸಸ್ಥಾನಗಳಾಗಿ ಪರಿವರ್ತಿಸಲು ಸಹಾಯ ಮಾಡುವುದು ಅವರ ಉದ್ದೇಶವಾಗಿದೆ. ಪಕ್ಷಿಗಳ ಸಂತಾನೋತ್ಪತ್ತಿಗೆ ಅನುಕೂಲ ಮಾಡಿಕೊಡುವ ಮೂಲಕ ಅವುಗಳ ಸಂಖ್ಯೆ ಹೆಚ್ಚಾಗಿಸುವುದೇ ಇವರ ಗುರಿಯಾಗಿದೆ.
ಪ್ರಸ್ತುತ ಮಚಿಲಿಪಟ್ನಂನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಮಹೇಶ್ ವಾರಾಂತ್ಯದಲ್ಲಿ ಮನೆಗೆ ಬಂದು ಗುಬ್ಬಚ್ಚಿಗಳ ಆರೈಕೆಗಾಗಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. 2009 ರಲ್ಲಿ ತಮ್ಮ ಮನೆಯಲ್ಲಿ 2 ಪಕ್ಷಿ ಮನೆಗಳಲ್ಲಿ ಪ್ರಯೋಗ ಪ್ರಾರಂಭಿಸಿದ ಮಹೇಶ್, ಮೂರು ವರ್ಷಗಳಲ್ಲಿ ಗುಬ್ಬಚ್ಚಿಯ ಸಂತತಿ ಹೆಚ್ಚಾಗಿರುವುದನ್ನು ಗಮನಿಸಿದರ. ಮಹೇಶ್ ಅವರು ಇಲ್ಲಿಯವರೆಗೆ ವಿತರಿಸಿದ ಶೇ 97ರಷ್ಟು ಪಕ್ಷಿ ಮನೆಗಳಲ್ಲಿ ಗುಬ್ಬಚ್ಚಿಗಳು ಆವಾಸಸ್ಥಾನಗಳನ್ನು ರಚಿಸಿವೆ.
ಮುಂಬೈನ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಲ್ಲಿ ಪಕ್ಷಿಗಳ ಬಗ್ಗೆ ಸಂಶೋಧನೆ ನಡೆಸಿದ ಮಹೇಶ್, ಗುಬ್ಬಚ್ಚಿ ಆವಾಸ ಸ್ಥಾನಗಳ ಅಪಾಯಗಳು ಮತ್ತು ಅವನತಿಯ ಬಗ್ಗೆ ಪಿಹೆಚ್‌ಡಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಅವರು ರ‍್ಯಾಲಿಗಳನ್ನು ಸಹ ಆಯೋಜಿಸುತ್ತಾರೆ. ಈ ಹಿಂದೆಗಿಂತಲೂ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಮತ್ತು ಮಾನವ ಚಟುವಟಿಕೆಗಳು ಗುಬ್ಬಚ್ಚಿಗಳ ಜೀವನ ಮತ್ತು ವಾಸಕ್ಕೆ ಅಪಾಯಕಾರಿಯಾಗಿದೆ. ನಮ್ಮ ಮನೆಗಳಲ್ಲಿ ಗುಬ್ಬಚ್ಚಿಗಳಿಗೆ ಆವಾಸ ಸ್ಥಾನಗಳನ್ನು ಸ್ಥಾಪಿಸಲು ಅವಕಾಶವಿದ್ದರೆ, ಅವುಗಳನ್ನು ಅಳಿವಿನಂಚಿನಿಂದ ರಕ್ಷಿಸಬಹುದು ಎಂಬುದು ಮಹೇಶ್ ಅಭಿಪ್ರಾಯವಾಗಿದೆ.