ನವದೆಹಲಿ: ವಂದೇ ಭಾರತ ಮಿಷನ್‌ನ ನಾಲ್ಕನೇ ಹಂತದಲ್ಲಿ ಜುಲೈ 3 ರಿಂದ 15 ರವರೆಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು 17 ದೇಶಗಳಿಗೆ ತನ್ನ 170 ವಿಮಾನಗಳನ್ನು ಕಳುಹಿಸಲಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ದೊರೆತಿದೆ.
ಕೊರೊನಾದಿಂದಾಗಿ ಮಾರ್ಚ್ 23 ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ದೇಶದಲ್ಲಿ ಸ್ಥಗಿತಗೊಳಿಸಲಾಗಿತ್ತು. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಮೇ 6 ರಂದು ಕೇಂದ್ರ ಸರ್ಕಾರ 'ವಂದೇ ಭಾರತ ಮಿಷನ್' ಪ್ರಾರಂಭಿಸಿತು.
ವಂದೇ ಭಾರತ ಮಿಷನ್‌ನ ನಾಲ್ಕನೇ ಹಂತದಲ್ಲಿ ಏರ್ ಇಂಡಿಯಾದ 170 ವಿಮಾನಗಳು ಹಾರಾಟ ನಡೆಸಲಿದ್ದು, ಕೆನಡಾ, ಅಮೆರಿಕಾ, ಇಂಗ್ಲೆಂಡ್, ಕೀನ್ಯಾ, ಶ್ರೀಲಂಕಾ, ಫಿಲಿಪೈನ್ಸ್, ಕಿರ್ಗಿಸ್ತಾನ್, ಸೌದಿ ಅರೇಬಿಯಾ, ಬಾಂಗ್ಲಾದೇಶ, ಥಾಯ್ಲ್ಯಾಂಡ್, ದಕ್ಷಿಣ ಆಫ್ರಿಕಾ, ರಷ್ಯಾ, ಆಸ್ಟ್ರೇಲಿಯಾ, ಮ್ಯಾನ್ಮಾರ್ ಸೇರಿದಂತೆ ಒಟ್ಟು 17 ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಿದೆ. ಮಾಹಿತಿಯ ಪ್ರಕಾರ 38 ವಿಮಾನಗಳು ಭಾರತ-ಇಂಗ್ಲೆಂಡ್, 32 ವಿಮಾನಗಳು ಭಾರತ-ಅಮೆರಿಕಾ, 26 ವಿಮಾನಗಳು ಭಾರತ-ಸೌದಿ ಅರೇಬಿಯಾ ಮಾರ್ಗಗಳಲ್ಲಿ ಹಾರಾಟ ನಡೆಸಲಿವೆ.
ಮೊದಲನೇ, ಎರಡನೇ ಹಾಗೂ ಮೂರನೇ ಹಂತದ ಮಿಷನ್ ಅಡಿಯಲ್ಲಿ ಮೇ 7 ರಿಂದ ಜೂನ್ 24ರ ವರೆಗೆ ಒಟ್ಟು 1,414 ವಿಮಾನಗಳು ಕಾರ್ಯಾಚರಣೆ ನಡೆಸಿದ್ದು, 1,82,313 ಪ್ರಯಾಣಿಕರನ್ನು ಕರೆತಂದಿದೆ.