ಜಮ್ಮು ಕಾಶ್ಮೀರ: ಒಂದು ಕಡೆ ಒಣ ಕಂದು ಭೂಮಿಯ ಮೇಲೆ ಅಸಂಖ್ಯಾತ ಹೂವಿನ ಹಾಸಿಗೆ. ಇನ್ನೊಂದೆಡೆ ಹಚ್ಚ ಹಸಿರಿನ ಭತ್ತದ ಗದ್ದೆಗಳು. ಇದು ಜಮ್ಮು ಕಾಶ್ಮೀರದ ಪ್ಯಾಂಪೋರ್ ಪಟ್ಟಣದ ಸುತ್ತಲಿನ ದೃಶ್ಯ. ಕಾಶ್ಮೀರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಕೂಡ, ಪ್ಯಾಂಪೋರ್‌ಗೆ ಭೇಟಿ ನೀಡದೇ ಇರಲ್ಲ. ಹಾಗೂ ಕಾಶ್ಮೀರದ ಮಾರುಕಟ್ಟೆಗಳಿಂದ ಕೇಸರಿಯನ್ನು ಖರೀದಿ ಮಾಡದೇ ಹಿಂದಿರುಗುವುದಿಲ್ಲ.
ಕೇಸರಿ ಕೃಷಿಯಿಂದ ಶತಮಾನಗಳಿಂದಲೂ ಅಲ್ಲಿನ ಜನರ ಆರ್ಥಿಕತೆಯು ಉತ್ತಮವಾಗಿದೆ. ಈ ಪ್ರದೇಶದ ಜನರು ಬೇಸಾಯದಿಂದ ಸಂತೋಷವಾಗಿದ್ದು, ಏಕೆಂದರೆ ಇದು ಆರ್ಥಿಕವಾಗಿ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಸೀಮಿತ ಸ್ಥಳೀಯ ಬಳಕೆಯ ಹೊರತಾಗಿಯೂ, ಕೇಸರಿ ಕಾಶ್ಮೀರದ ಸಂಸ್ಕೃತಿಯ ಒಂದು ಭಾಗವಾಗಿದೆ. ಪ್ರಸಿದ್ಧ ವಾಜ್ವಾನ್ ಹಬ್ಬ ಮತ್ತು ವಿಶಿಷ್ಟವಾದ ಕೆಹ್ವಾ ಬ್ರೂ ಕೇಸರಿ ಇಲ್ಲದೆ ಸಂಪೂರ್ಣವಾಗಲ್ಲ. ಕಳೆದ ಕೆಲವು ದಶಕಗಳಲ್ಲಿ ಕೇಸರಿ ಬೆಳೆಯುವುದು ಇಲ್ಲಿನ ಸ್ಥಳೀಯರಿಗೆ ಸಾಕಷ್ಟು ಸವಾಲಿನ ಕೆಲಸವಾಗಿದ್ದು, ಆದರೆ ಸ್ಥಳೀಯ ಆಡಳಿತವು ಕೇಸರಿ ಕೃಷಿಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ.
ಕೇಸರಿ ವಾಣಿಜ್ಯ ಮೌಲ್ಯವನ್ನು ಹೊಂದಿದ್ದು, ಅದರ ರಾಸಾಯನಿಕ ಘಟಕಗಳಾದ ಕ್ರೋಸಿನ್, ಪಿಕ್ರೊಕ್ರೊಸಿನ್ ಮತ್ತು ಸಫ್ರಾನಲ್ ಔಷಧೀಯ ವಲಯದಲ್ಲಿ ಅದರ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಹಾಗೂ ಸುಗಂಧ ದ್ರವ್ಯ, ಸೌಂದರ್ಯವರ್ಧಕ ಉದ್ಯಮದಲ್ಲಿಯೂ ಕೇಸರಿಯನ್ನು ಬಳಸಲಾಗುತ್ತದೆ. ಹಾಗೂ ಹಿಂದೂ ಆರಾಧಕರು ಕೇಸರಿಯನ್ನು ದೇವತೆಗಳಿಗೆ ಅರ್ಪಿಸುತ್ತಾರೆ.
ಇನ್ನು ಕೇಸರಿ ಕೃಷಿ ಸೂಕ್ಷ್ಮ ಹಾಗೂ ವಿಶಿಷ್ಟವಾಗಿದ್ದು, ಒಂದು ಕೆಜಿ ಕೇಸರಿ ಸಿಗಬೇಕಾದರೆ 1.7 ಮಿಲಿಯನ್ ಹೂವುಗಳು ಅರಳಬೇಕು. 2020 ರಲ್ಲಿ ಮೊದಲ ಬಾರಿಗೆ ಕಾಶ್ಮೀರಿ ಕೇಸರಿಯು 'ಭೌಗೋಳಿಕ ಮಾನ್ಯತೆ ' ಅಂದರೆ ಜಿಯಾಗ್ರಫಿಕಲ್ ಇಂಡಿಕೇಶನ್ ಟ್ಯಾಗ್ ಅನ್ನು ಪಡೆದುಕೊಂಡಿದೆ. ಅದು ಈಗ ಇರಾನ್, ಇಟಲಿ ಮತ್ತು ಸ್ಪೇನ್ ಮಾರುಕಟ್ಟೆಗಳಲ್ಲಿ ಬಲವಾಗಿ ನಿಲ್ಲಲು ಸಹಾಯ ಮಾಡುತ್ತದೆ.
ಜಿಐ ಟ್ಯಾಗ್ನಿಂದ ಕಾಶ್ಮೀರ ಕೇಸರಿಯ ಕಲಬೆರಕೆಯಾಗುವುದನ್ನು ನಿಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ ಕಾಶ್ಮೀರದ ಕೇಸರಿಗೆ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗಲಿದೆ. ಇನ್ನು 3,715 ಹೆಕ್ಟೇರ್ ನಷ್ಟು ಪ್ರದೇಶವನ್ನು ಪುನರುಜ್ಜೀವನಗೊಳಿಸಿ ಕೇಸರಿ ಬೆಳೆ ಬೆಳೆಯುವುದಕ್ಕೆ 411 ಕೋಟಿ ರೂಪಾಯಿಗಳ ಯೋಜನೆಯ ಎನ್ಎಂಎಸ್ ಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.
ಅಕ್ಟೋಬರ್‌ನಲ್ಲಿ ಕೇಸರಿ ಹೂವುಗಳು ಪೂರ್ಣವಾಗಿ ಅರಳುತ್ತವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕೊಯ್ಲು ಮಾಡಲಾಗುತ್ತದೆ. ಬೆಳೆಯನ್ನು ರಕ್ಷಿಸಲು ಮತ್ತು ಅದರ ಇಳುವರಿಯನ್ನು ಹೆಚ್ಚಿಸಲು ಆಧುನಿಕ ವಿಧಾನಗಳ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದರ ಜೊತೆಗೆ ಕಾಶ್ಮೀರದ ಕೇಸರಿ ಉದ್ಯಮವು, ತನ್ನ ಶತಮಾನಗಳ ಹಳೆಯ ಇತಿಹಾಸದ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ.