ದೆಹಲಿ : ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ವಾಸೀಂ ಜಾಫರ್ ಅವರನ್ನು ಉತ್ತರಾಖಂಡ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದು ರಾಜ್ಯ ತಂಡದ ತರಬೇತುದಾರನಾಗಿ ಜಾಫರ್ ಅವರ ಮೊದಲ ಹಂತವಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ನನ್ನನ್ನು ಉತ್ತರಾಖಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದು ರಾಜ್ಯ ತಂಡದ ತರಬೇತುದಾರನಾಗಿ ನನ್ನ ಮೊದಲ ಹುದ್ದೆ. ಹಾಗಾಗಿ ತುಂಬಾ ಉತ್ಸುಕನಾಗಿದ್ದೇನೆ ಎಂದು ಜಾಫರ್ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಉತ್ತರಾಖಂಡದಲ್ಲಿ ಸಾಕಷ್ಟು ಯುವ ಮತ್ತು ಪ್ರತಿಭಾವಂತ ಆಟಗಾರರಿದ್ದಾರೆ ಎಂದು ನಾನು ಕೇಳಿದ್ದೇನೆ. ಅಲ್ಲಿನ ಅಂಡರ್-19 ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ನಾನು ಉತ್ತರಾಖಂಡ ತಂಡವನ್ನು ಮೇಲಿನ ಹಂತಕ್ಕೆ ತರಲು ಪ್ರಯತ್ನಿಸುತ್ತೇನೆ. ಗೆಲುವಿನ ಸಂಸ್ಕೃತಿ ಸೃಷ್ಟಿಸುವುದು ನನ್ನ ಮೊದಲ ಆದ್ಯತೆ ಎಂದರು.
ಜಾಫರ್ ಭಾರತ ತಂಡದ ಪರ 31 ಟೆಸ್ಟ್ ಪಂದ್ಯ ಆಡಿದ್ದಾರೆ. 11 ಅರ್ಧಶತಕ ಮತ್ತು 5 ಶತಕ ಸಹಿತ 34.11ರ ಸರಾಸರಿಯಲ್ಲಿ 1,944 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ಡಬಲ್ ಸೆಂಚುರಿ ಪಡೆದ ಕೆಲವೇ ಕೆಲವು ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಇವರು ಕೂಡ ಒಬ್ಬರು. ಸೇಂಟ್ ಲೂಸಿಯಾದಲ್ಲಿ ಆತಿಥೇಯರ ವಿರುದ್ಧ 212 ರನ್ ಗಳಿಸಿದ್ದರು.
ಇವರು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಬಹುಪಾಲು ಮುಂಬೈ ಪರ ಆಡಿದ್ದರು. ವಿದರ್ಭ ತಂಡವನ್ನ ಕೂಡ ಕೆಲ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು.
ಜಾಫರ್ 260 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 19,410 ರನ್ ಗಳಿಸಿದ್ದಾರೆ. 91 ಅರ್ದಶತಕ ಮತ್ತು 57 ಶತಕ ಇವರ ಹೆಸರಿನಲ್ಲಿ ದಾಖಲಾಗಿವೆ. ಮತ್ತು ಪಂದ್ಯವೊಂದರಲ್ಲಿ 314 ರನ್ ಗಳಿಸಿರುವುದು ಅವರ ಶ್ರೇಷ್ಠ ಸಾಧನೆ. 150 ರಣಜಿ ಪಂದ್ಯಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಅವರು, ರಣಜಿ ಟ್ರೋಫಿಯಲ್ಲಿ 12,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.