ಇಟಾವಾ(ಉತ್ತರ ಪ್ರದೇಶ): ಇಟಾವಾದಲ್ಲಿ ಬುಧವಾರ ರಾತ್ರಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮಹಿಳೆಯೊಬ್ಬಳು ಸಾವಿಗೀಡಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಹಲವಾರು ವರ್ಷಗಳಿಂದಲೂ ಆಸ್ತಿ ಹಂಚಿಕೊಳ್ಳುವ ವಿಚಾರವಾಗಿ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯವಿತ್ತು. ಉಭಯ ಕುಟುಂಬಗಳು ಬುಧವಾರ ಮತ್ತೆ ವಾಗ್ವಾದಕ್ಕೆ ಇಳಿದಿದ್ದು, ಇದು ಗಂಭೀರ ತಿರುವು ಪಡೆದುಕೊಂಡಿದೆ. ತೀವ್ರ ವಾಗ್ವಾದದ ನಂತರ, ಮಹಿಳೆಯು ತನ್ನ ಕುಟುಂಬ ಸದಸ್ಯರಿಂದ ಕ್ರೂರವಾಗಿ ಹಲ್ಲೆಗೊಳಗಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಮಹಿಳೆಯ ಮಗ ಅನುಜ್ ಮಾತನಾಡಿ, "ನಾವು ದೂರು ನೀಡಿ ಬಸ್ರೆಹರ್ ಪೊಲೀಸ್ ಠಾಣೆಯಿಂದ ಹಿಂತಿರುಗುತ್ತಿದ್ದಾಗ ಉಳಿದ ಕುಟುಂಬ ಸದಸ್ಯರು ನಮ್ಮನ್ನು ಸುತ್ತುವರೆದು ಕ್ರೂರವಾಗಿ ಹೊಡೆಯಲು ಪ್ರಾರಂಭಿಸಿದರು. ನನ್ನ ತಾಯಿಯ ಮೇಲೆ ಹೆಚ್ಚು ಹಲ್ಲೆ ನಡೆಸಲಾಯಿತು. ಗಂಭೀರ ಗಾಯಗೊಂಡ ಆಕೆ ಅಲ್ಲೇ ಕುಸಿದು ಬಿದ್ದಳು ಎಂದು ಹೇಳಿದ್ದಾನೆ.
ಘರ್ಷಣೆಯ ಸಂದರ್ಭದಲ್ಲಿ ಮೃತ ಮಹಿಳೆಯ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ಸದ್ಯ ಮೂವರನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಓಂ ವೀರ್ ಸಿಂಗ್ ಹೇಳಿದರು.