ಫರುಖಾಬಾದ್ (ಉತ್ತರಪ್ರದೇಶ): ಲಾಕ್ಡೌನ್ ಸಡಿಲಿಕೆ ಹಾಗೂ ಆರ್ಥಿಕ ಸಂಕಷ್ಟದ ಕಾಲದಲ್ಲಿ ದೇಶದ ಹಲವೆಡೆ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಇದರ ಜೊತೆ ಜೊತೆಗೆ ಕುಟುಂಬ ಕಲಹಗಳು, ಅಪರಾಧ ಪ್ರರಕಣಗಳು ಹೆಚ್ಚುತ್ತಿವೆ.
ಉತ್ತರ ಪ್ರದೇಶದ ಫರುಖಾಬಾದ್ನಲ್ಲಿ ಮದ್ಯ ಖರೀದಿಸಲು ಆಭರಣ ನೀಡಲು ನಿರಾಕರಿಸಿದ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ಬಮರುಲಿಯಾ ಗ್ರಾಮದ ಪ್ರಶಾಂತ್ ಎಂಬಾತ ಮದ್ಯ ಸೇವಿಸಲು ತನ್ನ ಪತ್ನಿ ಬಳಿ ಆಭರಣಕ್ಕಾಗಿ ಪೀಡಿಸಿದ್ದಾನೆ. ಇದಕ್ಕೆ ಪತ್ನಿ ಒಪ್ಪದೆ ನಿರಾಕರಿಸಿದ್ದರಿಂದ ಕೋಪಗೊಂಡ ಪ್ರಶಾಂತ್ ಪತ್ನಿ ಲಕ್ಷ್ಮೀ ದೇವಿಯನ್ನು ಮರದ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಈ ಸಂಬಂಧ ನವಾಬ್ಜಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಶಾಂತ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿರುವ ಸ್ಟೇಷನ್ ಹೌಸ್ ಅಧಿಕಾರಿ ರಾಕೇಶ್ ಕುಮಾರ್ ಶರ್ಮಾ, ಪ್ರಶಾಂತ್ ಒಬ್ಬ ಮದ್ಯ ವ್ಯಸನಿಯಾಗಿದ್ದು, ತನ್ನ ಪತ್ನಿಯನ್ನು ಯಾವಾಗಲೂ ಹಣಕ್ಕಾಗಿ ಪೀಡಿಸುತ್ತಿದ್ದ. ಈಗಲೂ ತನ್ನ ಆಭರಣ ಕೊಡುವಂತೆ ಪೀಡಿಸಿದ್ದಾನೆ. ಇದಕ್ಕೆ ಲಕ್ಷ್ಮೀ ಒಪ್ಪದ ಕಾರಣ ಆಕೆಗೆ ಮರದ ಕೋಲಿನಿಂದ ರಕ್ತ ಹರಿಯುವವರೆಗೂ ಹೊಡೆದಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಆಭರಣಗಳೊಂದಿಗೆ ಪರಾರಿಯಾಗಿದ್ದಾನೆ ಎಂದಿದ್ದಾರೆ.
ತೀವ್ರ ರಸ್ತಸ್ರಾವವಾದ ಹಿನ್ನೆಲೆ ಲಕ್ಷ್ಮೀ ಸಾವನ್ನಪ್ಪಿದ್ದಾಳೆ. ಆಕೆಯ ಪೋಷಕರು ಪತಿಯ ವಿರುದ್ಧ ನವಾಬ್ಗಂಜ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಪ್ರಶಾಂತ್ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.