ಅಜಂಘಡ್(ಉತ್ತರ ಪ್ರದೇಶ): ಬೈಕ್ ಖರೀದಿ ಮಾಡಬೇಕೆಂಬ ಹುಚ್ಚು ಹಿಡಿಸಿಕೊಂಡ ವ್ಯಕ್ತಿಯೋರ್ವ ಪತ್ನಿಯ ಶೀಲವನ್ನೇ ಸಾಮಾಜಿಕ ಜಾಲತಾಣದಲ್ಲಿ ಮಾರಾಟಕ್ಕಿಟ್ಟಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೋಟಾರ್ ಸೈಕಲ್ ಕೊಡಿಸುವಂತೆ ಪತ್ನಿ ಕುಟುಂಬಸ್ಥರ ಬಳಿ ಈತ ಬೇಡಿಕೆ ಇಟ್ಟಿದ್ದಾನೆ. ಆದರೆ ಅದು ಸಾಧ್ಯವಾಗದೇ ಹೋದಾಗ ಸಾಮಾಜಿಕ ಜಾಲತಾಣದಲ್ಲಿ ಹೆಂಡತಿಯ ಶೀಲವನ್ನ ಮಾರಾಟಕ್ಕಿಟ್ಟಿದ್ದು, ಇದೀಗ ಪೊಲೀಸರು ಈತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಮೆಹ್ನಗರ್ ಪೊಲೀಸ್ ಠಾಣೆಯ ಥುತಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಪುನೀತ್ ಮೋಟಾರ್ ಸೈಕಲ್ಗಾಗಿ ಹೆಂಡತಿಗೆ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಜತೆಗೆ ಆಕೆಯನ್ನ ಹೆತ್ತವರ ಮನೆಗೆ ಸಹ ಕಳುಹಿಸಿದ್ದನು ಎನ್ನಲಾಗಿದೆ.
ಆಕೆಯ ಮೇಲೆ ಮತ್ತಷ್ಟು ಕೋಪಗೊಂಡ ಪುನೀತ್ ಹೆಂಡತಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಅದರ ಕೆಳಗೆ ಫೋನ್ ನಂಬರ್ ಹಾಕಿದ್ದಾನೆ. ಲೈಂಗಿಕವಾಗಿ ಬಳಸಿಕೊಳ್ಳಲು ಹಣ ಪಾವತಿಸುವಂತೆ ಹೇಳಿದ್ದಾನೆ. ಮಹಿಳೆಗೆ ಮೇಲಿಂದ ಮೇಲೆ ಕರೆ ಬರಲು ಆರಂಭವಾಗುತ್ತಿದ್ದಂತೆ ಆಕೆ ಸೈಬರ್ ಸೆಲ್ಗೆ ದೂರು ನೀಡಿದ್ದಾಳೆ. ಇದೀಗ ಆತನ ಬಂಧನ ಮಾಡಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.