ಲಖನೌ (ಉತ್ತರ ಪ್ರದೇಶ): ಪೊಲೀಸರು ಸಹಕರಿಸದ ಹಿನ್ನೆಲೆಯಲ್ಲಿ ಗಾಯಾಳು ಪತ್ನಿಯನ್ನು ವ್ಯಕ್ತಿಯೊಬ್ಬ ಸೈಕಲ್ ಗಾಡಿಯಲ್ಲಿ ಮಲಗಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಬಸ್ತಿ ಜಿಲ್ಲೆಯಲ್ಲಿಈ ಘಟನೆ ನಡೆದಿದ್ದು, ''ಮನೆಯಲ್ಲಿ ನಡೆದ ಗಲಾಟೆಯಲ್ಲಿ ನನ್ನ ಸಹೋದರ, ನನ್ನ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿದ್ದ ಆಕೆಯನ್ನು ನಾನು ಪೊಲೀಸ್ ಠಾಣೆಗೆ ಕರೆತಂದು ದೂರು ದಾಖಲಿಸಿದ್ದೆ. ಈ ವೇಳೆ, ಆಸ್ಪತ್ರೆಗೆ ದಾಖಲಿಸಲು ಸಹಕರಿಸುವಂತೆ ಪೊಲೀಸರಿಗೆ ಮನವಿ ಮಾಡಿದೆ. ಆ್ಯಂಬುಲೆನ್ಸ್ ಕರೆ ಮಾಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ ಆಕೆಯನ್ನು ಸೈಕಲ್ ಗಾಡಿಯಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ಸಾಗಿಸಿದ್ದೇನೆ'' ಎಂದು ಗಾಯಾಳು ಮಹಿಳೆಯ ಪತಿ ದಿನೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮೂಲಗಳ ಪ್ರಕಾರ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆ್ಯಂಬುಲೆನ್ಸ್ಗಳ ಕೊರತೆಯಿದೆ. ಇದೇ ಕಾರಣದಿಂದ ದಿನೇಶ್ಕುಮಾರ್ ಹಾಗೂ ಆತನ ಪತ್ನಿಗೆ ಆ್ಯಂಬುಲೆನ್ಸ್ ಒದಗಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಗಾಯಾಳು ಹಾಗೂ ಮೂವರು ಮಕ್ಕಳನ್ನು ವ್ಯಕ್ತಿ ಸೈಕಲ್ ಗಾಡಿಯಲ್ಲಿ ಕರೆದೊಯ್ಯುತ್ತಿದ್ದಾನೆ. ವ್ಯಕ್ತಿ ಆ್ಯಂಬುಲೆನ್ಸ್ಗೆ ಕರೆ ಮಾಡಿರುವುದರ ಬಗ್ಗೆ ಹಾಗೂ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ತನಿಖೆಯಾಗಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಒತ್ತಾಯಿಸಿದ್ದಾರೆ.