ಚಂಡೀಗಢ: ಅಮೆರಿಕದಲ್ಲಿ ಭಯೋತ್ಪಾದಕ ಸಂಘಟನೆಗೆ ಹಣ ಸಂಗ್ರಹಿಸಿದ ಆರೋಪದಲ್ಲಿ ದೋಷಿ ಎಂದು ಸಾಬೀತಾದ ಅಲ್ ಖೈದಾ ಭಯೋತ್ಪಾದಕ ಮೊಹಮ್ಮದ್ ಇಬ್ರಾಹಿಂ ಜುಬೈರ್, ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಭಾರತಕ್ಕೆ ಗಡೀಪಾರು ಮಾಡಲಾಗಿದೆ.
167 ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದ್ದು ಅದರಲ್ಲಿ ಜುಬೈರ್ ಕೂಡ ಒಬ್ಬರು ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಅಧಿಕಾರಿಗಳ ಪ್ರಕಾರ, ಗಡೀಪಾರು ಮಾಡಿದವರನ್ನು ವಿಶೇಷ ವಿಮಾನದಲ್ಲಿ ಮೇ 19ರಂದು ಪಂಜಾಬ್‌ನ ಅಮೃತಸರಕ್ಕೆ ಕರೆತರಲಾಯಿತು. ಅಂದಿನಿಂದ ಭಾರತ ಮೂಲದ ಜುಬೈರ್ (38) ಅಮೃತಸರದ ಕೇಂದ್ರವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗುಪ್ತಚರ ಅಧಿಕಾರಿಗಳ ಪ್ರಕಾರ, ಹೈದರಾಬಾದ್ನಲ್ಲಿ ಇಂಜಿನಿಯರ್ ಆಗಿದ್ದ ಜುಬೈರ್ನನ್ನ 2011ರಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. 2009ರಲ್ಲಿ ಅಲ್ ಖೈದಾ ನಾಯಕ ಅನ್ವರ್ ಅಲ್-ಅವ್ಲಾಕಿಗೆ ಈತ ಹಣ ಸಂಗ್ರಹಿಸಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿತ್ತು.
ಅಮೆರಿಕದ ನ್ಯಾಯಾ ಇಲಾಖೆ ಪ್ರಕಾರ, ಜುಬೈರ್ ಇರಾಕ್ನಲ್ಲಿನ ಅಮೆರಿಕ ಮಿಲಿಟರಿ ಸಿಬ್ಬಂದಿಗಳ ವಿರುದ್ಧ ಹಿಂಸಾತ್ಮಕ ಕೃತ್ಯವನ್ನು ಬೆಂಬಲಿಸುವ ಉದ್ದೇಶದಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸಿದನೆಂದು ಆರೋಪಿಸಲಾಗಿದೆ.
ಭಾರತೀಯ ಪ್ರಜೆಯಾದ ಇಬ್ರಾಹಿಂ ಮೊಹಮ್ಮದ್ (ಜುಬೈರ್) 2001ರಿಂದ 2005ರವರೆಗೆ ಉರ್ಬಾನಾ-ಚಾಂಪೇನ್‌ನಲ್ಲಿನ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದ. 2006ರ ವೇಳೆಯಲ್ಲಿ ಟೊಲೆಂಡೋ, ಓಹಿಯೋಗೆ ತೆರಳಿದ್ದ ಈತ 2007ರ ಸಮಯದಲ್ಲಿ ಅಮೆರಿಕ ಮೂಲದ ಮಹಿಳೆಯನ್ನು ವಿವಾಹವಾಗಿ ಕಾನೂನಿನ ಪ್ರಕಾರ ಅಲ್ಲಿನ ಪೌರತ್ವ ಪಡೆದುಕೊಂಡಿದ್ದ ಎಂದು ಅಮೆರಿಕ ನ್ಯಾಯ ಇಲಾಖೆ 2018ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.