ವಾಷಿಂಗ್ಟನ್ (ಅಮೆರಿಕ) : ಭಾರತ- ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಎರಡೂ ರಾಷ್ಟ್ರಗಳು ಶಾಂತಿಯುತವಾಗಿ ಪರಿಹರಿಸಿಕೊಳ್ಳುತ್ತವೆ ಎಂದು ಅಮೆರಿಕ ವಿಶ್ವಾಸ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ಇಲಾಖೆಯೊಂದರ ವಕ್ತಾರರೊಬ್ಬರು ಈ ಸಂದರ್ಭವನ್ನು ತುಂಬಾ ಹತ್ತಿರದಿಂದ ವೀಕ್ಷಿಸುತ್ತಿದ್ದೇವೆ. ಎರಡೂ ರಾಷ್ಟ್ರಗಳು ಸೇನೆಯನ್ನು ಹಿಂತೆಗೆಯುವ ಭರವಸೆಯಲ್ಲಿದ್ದು, ಸದ್ಯದ ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ವಿಶ್ವಾವಿದೆ ಎಂದಿದ್ದಾರೆ.
20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಘೋಷಿಸಿದ್ದು, ಮೃತಪಟ್ಟ ಸೈನಿಕರಿಗೆ ಸಂತಾಪ ವ್ಯಕ್ತಪಡಿಸುತ್ತೇವೆ. ಚೀನಾ ಹಾಗೂ ಭಾರತದ ಗಡಿ ಸಮಸ್ಯೆ ಬಗ್ಗೆ ಜೂನ್ 2ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು ಎಂದು ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.