ಆದರೆ ನಂತರ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್ ಈ ಯೋಜನೆಯನ್ನು ರದ್ದು ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಇದು ಅಂತ್ಯದ ಆರಂಭ ಆಗಿತ್ತು. ಟ್ರಂಪ್ ಪರಮಾಣು ಒಪ್ಪಂದದಿಂದ ಯಾವಾಗ ಹಿಂದೆ ಸರಿದರೋ ಆಗಿನಿಂದ ಇರಾನಿನ ಮೇಲೆ ಗರಿಷ್ಠ ಒತ್ತಡ ತಂತ್ರ ಬಳಸಿ ಅದನ್ನು ಹದ್ದುಬಸ್ತಿನಲ್ಲಿಡಲು ವ್ಯಾಪಕ ನಿರ್ಬಂಧ ಹೇರಿದರು. ಈಗಾಗಲೇ ಆಳವಾಗಿ ಬಿರುಕುಬಿಟ್ಟಿದ್ದ ಶಿಯಾ - ಸುನ್ನಿ ಕಂದರವನ್ನು ಟ್ರಂಪ್ ಆಡಳಿತ ಬಳಸಿಕೊಂಡಿತು. ಜೊತೆಗೆ ಅಸ್ತಿತ್ವಕ್ಕಾಗಿ ಪರಸ್ಪರ ಜಿದ್ದಾಜಿದ್ದಿಯಲ್ಲಿ ತೊಡಗಿರುವ ಸೌದಿಯನ್ನು ವ್ಯಾಪಕವಾಗಿ ಮತ್ತು ಇಸ್ರೇಲ್ನ್ನು ಪರೋಕ್ಷ ದಾಳವಾಗಿ ಉರುಳಿಸಿತು.
ಜೇರ್ಡ್ ಕುಶ್ನರ್ (ಟ್ರಂಪ್ ಸಲಹೆಗಾರ ಮತ್ತು ಅವರ ಅಳಿಯ) ನೇತೃತ್ವದಲ್ಲಿ ಇಸ್ರೇಲ್ ಮತ್ತು ಕೊಲ್ಲಿ ದೇಶಗಳ ಸಂಬಂಧದಲ್ಲಿ ಸ್ವಾಗತಾರ್ಹ ಬದಲಾವಣೆಗಳು ಆರಂಭ ಆಗಿದ್ದವು. ಆದರೆ ಈಗಾಗಲೇ ಹಲವು ಘರ್ಷಣೆಗಳಿಂದ ಜರ್ಜರಿತಗೊಂಡಿದ್ದ ಮಧ್ಯಪ್ರಾಚ್ಯದಲ್ಲಿ ಇರಾನಿನ ಸವಾಲು ಮತ್ತಷ್ಟು ಅಧಿಕವಾಗಿ ಕ್ಷೋಭೆ ತಲೆದೋರಿತು. ಕೆಲವು ಕೃತ್ಯಗಳಲ್ಲಿ ಇರಾನ್ ನೇರವಾಗಿ ಭಾಗಿ ಆಗಿರುವುದು ಮತ್ತು ಕೆಲವು ಪ್ರಕರಣಗಳಲ್ಲಿ ಅದರ ಪ್ರಭಾವ ಇರುವುದು ಕಾಣುತ್ತಿತ್ತು. ಅಮೆರಿಕದ ಹಿತಾಸಕ್ತಿಗಳಿಗೆ ಅನುಗುಣವಾಗಿ ಲಿಬಿಯಾ, ಯೆಮನ್, ಇರಾಕ್, ಗಾಜಾ, ಸಿರಿಯಾ ಹಾಗೂ ಲೆಬನಾನ್ ಹೆಜ್ಜೆ ಇರಿಸಿದವು. ಇರಾನ್‌ನಲ್ಲಿ ಇರುವ ಹೆಜ್ಬೊಲ್ಲಾ, ಹಮಾಸ್, ಹೌತಿಸ್ ಹಾಗೂ ಇರಾಕಿನ ಶಿಯಾ ಬಂಡುಕೋರ ಸಂಘಟನೆಗಳಂತಹ ಸರ್ಕಾರೇತರ ಗುಂಪುಗಳೊಂದಿಗೆ ಇರಾನ್ ನಿಕಟ ಸಂಬಂಧ ಹೊಂದಿದ್ದು ಇವುಗಳು ಆ ರಾಷ್ಟ್ರದ ಪ್ರಭಾವ ವಿಸ್ತರಿಸುವ ಸಾಧನಗಳಾಗಿ ಕೆಲಸ ಮಾಡುತ್ತಿವೆ.
ಜೆ ಸಿ ಪಿ ಒ ಎ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದ್ದು, ಅನೇಕ ಋಣಾತ್ಮಕ ಬೆಳವಣಿಗೆಗಳಿಗೆ ಕಾರಣ ಆಯಿತು. ಪರ್ಷಿಯಾ ಕೊಲ್ಲಿಯಲ್ಲಿ ‘ಕತ್ತಿ ಮಸೆತ ’ ಜೋರಾಯಿತು. ಇದು ವ್ಯಾಪಾರ ಮತ್ತು ಇಂಧನ ಸಾಗಣೆಯ ನಿರ್ಣಾಯಕ ತಾಣವಾದ ಹರ್ಮುಜ್ ಜಲಸಂಧಿಯಲ್ಲಿ ಅನೇಕ ಘಟನೆಗಳಿಗೆ ಎಡೆ ಮಾಡಿಕೊಟ್ಟಿತು. ಅಮೆರಿಕ ಸೇನೆಯ ಡ್ರೋನ್ ವಿಮಾನವನ್ನು ಮತ್ತು ಕೊಲ್ಲಿಯ ಹಡಗುಗಳನ್ನು ಹೊಡೆದುರುಳಿಸಿದ್ದು ಹಾಗೂ ಸೌದಿಯ ತೈಲ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿದ್ದಕ್ಕೆ ಅದೃಷ್ಟವಶಾತ್ ನೇರ ಪ್ರತಿಕ್ರಿಯೆ ದೊರೆಯದ ಪರಿಣಾಮ ಕೆಟ್ಟದ್ದೇನೂ ನಡೆಯಲಿಲ್ಲ. ಆದರೆ ಅದೇ ಸಮಯದಲ್ಲಿ ಒಂದು ನಿರ್ಧಾರಕ್ಕೆ ಬಂದ ಅಧ್ಯಕ್ಷ ಟ್ರಂಪ್, ಡಿಸೆಂಬರ್ 27ರಂದು ಅಮೆರಿಕದ ಗುತ್ತಿಗೆದಾರನೋರ್ವನನ್ನು ಮುಗಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಇರಾನಿನ ಅಲ್ ಕುದ್ಸ್ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಅವರ ಹತ್ಯೆಗೆ ಆದೇಶಿಸಿದರು.
ಡ್ರೋನ್ ದಾಳಿಯಲ್ಲಿ ಇರಾನ್ ಪರ ಧೋರಣೆ ತಳೆದಿದ್ದ ಮತ್ತೋರ್ವ ಸರ್ವೋಚ್ಛ ನಾಯಕ ಅಲ್ ಮೊಹನ್ನದಿ ಕೂಡ ಬಲಿಯಾದರು. ಜನರಲ್ ಗಳಾಗಿ ಸೇವೆ ಸಲ್ಲಿಸುತ್ತಿದ್ದ ನಾಯಕರನ್ನು ಹತ್ಯೆ ಮಾಡುವ ಮೂಲಕ ವಿದೇಶಿ ಸರ್ಕಾರಗಳು ಕೆಂಪು ಗೆರೆಯೊಂದನ್ನು ಮನಸೋಇಚ್ಛೆ ದಾಟಿ ನಿಯಮ ಉಲ್ಲಂಘಿಸಿವೆ. ಎರಡೂ ಕಡೆಯವರು ಯುದ್ಧ ಬೇಕಿಲ್ಲ ಎನ್ನುತ್ತಿರುವಾಗ ಮತ್ತು ಹಲವು ಮಧ್ಯವರ್ತಿಗಳು ಜಾಗೃತಿ ಮೂಡಿಸಿ ಮಾತುಕತೆಗೆ ಅನುವು ಮಾಡಿಕೊಡುತ್ತಿದ್ದ ಹೊತ್ತಿನಲ್ಲಿ ಇಂತಹ ಘಟನೆಗಳು ನಡೆದಿವೆ.
ಇರಾನಿನಲ್ಲಿ ಉಂಟಾಗಿರುವ ಆಘಾತ ಮತ್ತು ಶೋಕ ಸ್ವಾಭಾವಿಕವಾದುದು. ಸುಲೇಮಾನಿ ಅವರ ಅಂತ್ಯಸಂಸ್ಕಾರದ ವೇಳೆ ಹರಿದುಬಂದಿದ್ದ ಜನಸ್ತೋಮ ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳುವ ಮತ್ತು ಅದರ ಸಾವನ್ನು ಬಯಸುವ ಮಾತುಗಳಲ್ಲಿ ಅದು ವ್ಯಕ್ತ ಆಗುತ್ತಿತ್ತು. ಟ್ವಿಟ್ಟರ್ ಸಮರ ಕೂಡ ನಡೆಯುತ್ತಿದ್ದು, ಹಾನಿಕಾರಿಕ ಪರಿಣಾಮಗಳಿಗೆ ಮುನ್ನುಡಿ ಬರೆಯುವಂತಹ ಉದ್ವಿಗ್ನತೆ ತಲೆದೋರಿದೆ. ಇರಾನಿನ ಅತ್ಯುನ್ನತ ನಾಯಕ ಅಯಾತುಲ್ಲಾ ಖೊಮೇನಿ ಸೇರಿದಂತೆ ಮತ್ತಿತರ ನಾಯಕರು ಪ್ರತೀಕಾರ ಮತ್ತು ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದರಲ್ಲಿ ಅಚ್ಚರಿ ಇಲ್ಲ.
ತನ್ನ ಪ್ರದೇಶದಲ್ಲಿ ಅತಿಕ್ರಮಣ ಮಾಡಿ ಅಜಾಗರೂಕವಾಗಿ ನಡೆದುಕೊಂಡು ದೇಶದ ಸಾರ್ವಭೌಮತ್ವ ಉಲ್ಲಂಘಿಸಿರುವ ಕಾರಣಕ್ಕೆ ತನ್ನ ನೆಲದಿಂದ ಕಾಲ್ತೆಗೆಯುವಂತೆ ಇರಾಕ್, ಅಮೆರಿಕದ ದೂತವಾಸಕ್ಕೆ ಮತ್ತು ಆ ದೇಶದ ನಾಗರಿಕರಿಗೆ ಸೂಚನೆ ನೀಡಿದೆ. ಅಮೆರಿಕನ್ನರು ದೇಶ ದೊರೆಯುವಂತೆ ಇರಾಕ್ ಸಂಸತ್ತು ನಿರ್ಣಯ ಕೈಗೊಳ್ಳಲು ಮುಂದಾಗಿದೆ. ಇದರಿಂದ ಅಮೆರಿಕದ ಭೌಗೋಳಿಕ- ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ ಆಗಿದೆ. ಇಲ್ಲಿಯ ತನಕ ಈ ಪ್ರದೇಶದಲ್ಲಿ ಸೇನಾ ಉಪಸ್ಥಿತಿ ಕುರಿತಂತೆ ಅಮೆರಿಕ ಡೋಲಾಯಮಾನ ನಿಲುವು ಪ್ರದರ್ಶಿಸಿತ್ತು. ಆಫ್ಘಾನಿಸ್ತಾನದಿಂದ ಹಿಡಿದು ಸಿರಿಯಾ ತನಕ ಸೇನಾ ವಾಪಸಾತಿಗೆ ಅದು ಮುಂದಾಗಿತ್ತು. ಆದರೆ ಈಗ ನಡೆದಿರುವ ವಿದ್ಯಮಾನ ಮತ್ತು ಈ ಹಿಂದೆ ನಡೆದ ಕೆಲವು ಘಟನೆಗಳು ಮತ್ತು ಆಕಸ್ಮಿಕಗಳು ಅದರ ಸೇನಾ ಉಪಸ್ಥಿತಿ ಮುಂದುವರಿಸಲು ಇಂಬು ನೀಡಿವೆ. ಪರಿಣಾಮ ಅಮೆರಿಕದ ಹಿತಾಸಕ್ತಿಗೆ ಮತ್ತು ಅದರ ಸ್ವತ್ತಿಗೆ ಅಪಾಯ ಹೆಚ್ಚಿದೆ.
ಅಮೆರಿಕದ ಪರವಾಗಿ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಅವರು ಸುಲೇಮಾನಿ ಹತ್ಯೆಯನ್ನು ಏಕಪಕ್ಷೀಯವಾಗಿ ಸಮರ್ಥಿಸಿಕೊಂಡಿದ್ದಾರೆ. ‘ಜಗತ್ತು ಸುರಕ್ಷಿತ ಸ್ಥಳ ಎಂಬುದು ಬಹಳ ಸ್ಪಷ್ಟ ಆಗಿದೆ. ಖಾಸಿಂ ಸುಲೇಮಾನಿ ಇನ್ನು ಮುಂದೆ ಭೂಮಿ ಮೇಲೆ ಹೆಜ್ಜೆ ಇರಿಸುವುದಿಲ್ಲ. ಅಮೆರಿಕದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಸುಲೇಮಾನಿಯನ್ನು ನಿಗ್ರಹಿಸಲು ಮತ್ತು ಆತನ ಭವಿಷ್ಯದ ಯೋಜನೆಗಳನ್ನು ತಡೆಯಲು ಅಮೆರಿಕ ಅಧ್ಯಕ್ಷರು ಸರಿಯಾದ ಕ್ರಮ ಕೈಗೊಂಡಿದ್ದಾರೆ’ ಎಂದಿದ್ದಾರೆ. ಈ ನಡುವೆ ನಮ್ಮ ವಿರುದ್ಧ ದಾಳಿಗೆ ಮುಂದಾದರೆ ಇರಾನಿನ 52 ಸ್ಥಳಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರತಿದಾಳಿ ನಡೆಸುವುದಾಗಿ ಹೇಳುವ ಮೂಲಕ ಟ್ರಂಪ್ ಆ ಸ್ಥಳಗಳ ಪಟ್ಟಿ ಬಿಡುಗಡೆ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರು.
ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ. ಆದ್ರೆ ಈ ಪ್ರಕರಣದಲ್ಲಿ ಅದು ಪರಸ್ಪರ ಸಮ ಮತ್ತು ವಿರುದ್ಧ ದಿಕ್ಕಿನಲ್ಲಿ ನಡೆಯಬಾರದಿತ್ತು. ಇರಾನಿನ ‘ಬಿ ಟೀಂ’ ಎಂದು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಂದ ಕರೆಸಿಕೊಳ್ಳುವ ಇರಾನ್ ಪರ ಬಂಡುಕೋರ ಗುಂಪುಗಳು ತಮ್ಮದೇ ಆದ ಪ್ರತೀಕಾರದ ಕ್ರಮಗಳಿಗೆ ಮುಂದಾಗಬಹುದು. ಅಮೆರಿಕದ ಎಲ್ಲಾ ಮಿತ್ರರಾಷ್ಟ್ರಗಳು ಸಂಯಮದಿಂದ ಇರಲು ಮತ್ತು ಉದ್ವಿಗ್ನತೆ ಶಮನಕ್ಕೆ ಕರೆ ನೀಡಿದ್ದರೂ ಕೂಡ ಯಾರೂ ಸಹಿಸಲಾಗದಂತಹ ಈ ರೀತಿಯ ಏಕಪಕ್ಷೀಯ ಕ್ರಮಗಳಿಂದಾಗಿ ಮಧ್ಯಪ್ರಾಚ್ಯ ಉದ್ರಿಕ್ತಗೊಳ್ಳುವಂತಹ ಸರಣಿ ಕ್ರಿಯೆಗಳು ನಡೆಯಬಹುದು. ಪ್ರಸ್ತುತ ಎಲ್ಲಾ ದಿಕ್ಕಿನಿಂದ ಮಾತಿನ ಸಮರ ಆರಂಭವಾಗಿದೆ. ಆದರೆ ಇದರಿಂದ ಹಾನಿ ಆಗಿದೆ. ಸಮರ್ಥನೆಯ ದೃಷ್ಟಿಯಿಂದ ತನ್ನ ಪರ ಹಕ್ಕು ಚಲಾಯಿಸುವ ಹೆಚ್ಚಿನ ಅವಕಾಶ ಇರಾನಿಗೆ ದಕ್ಕಿದೆ. ಅಮೆರಿಕ ಮತ್ತು ಇರಾನ್ ನಡುವಿನ ವಿಚ್ಛೇದನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇದು ದೂರಗಾಮಿ ಪರಿಣಾಮಕ್ಕೆ ಕಾರಣ ಆಗಲಿದೆ.
ಹೊಸ ಅಧಿಕಾರ ಧ್ರುವೀಕರಣ ಮತ್ತು ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಸಂಗತಿಗಳು ಜಾಗತಿಕ ಸರಬರಾಜು ಸರಪಳಿ ಮೇಲೆ ಭಾರಿ ಆಕ್ರಮಣ ನಡೆಸಿ ವಿಶ್ವ ಶಾಂತಿ, ಆರ್ಥಿಕತೆ ಹಾಗೂ ಸ್ಥಿರತೆಗೆ ಧಕ್ಕೆ ತರಬಹುದು. ತೈಲ ಬೆಲೆಗಳ ಹೆಚ್ಚಳದಿಂದ ಅಮೆರಿಕ ಸೇರಿದಂತೆ ಕೆಲವು ದೇಶಗಳ ಬೊಕ್ಕಸಕ್ಕೆ ಅನುಕೂಲಕರ ಆಗಬಹುದು. ಆದರೆ ಮಿತ್ರರಾಷ್ಟ್ರಗಳ ಆರ್ಥಿಕತೆ ಮೇಲೆ ಹೆಚ್ಚು ಋಣಾತ್ಮಕ ಪರಿಣಾಮ ಬೀರುತ್ತದೆ. ಶಾಂತಿಗೆ ಸ್ವಲ್ಪ ಅವಕಾಶ ಇದೆ ಎಂಬುದು ಆಶಾದಾಯಕ ಸಂಗತಿ ಆಗಿದ್ದು, ಇತರೆ ದೇಶಗಳು ಸ್ವಹಿತಾಸಕ್ತಿಯ ಕಾರಣಕ್ಕಾಗಿ ಸಂಘರ್ಷ ಹೆಚ್ಚದಂತೆ ನೋಡಿಕೊಳ್ಳುವ ಸಾಧ್ಯತೆಯಿದೆ.
ಬೃಹತ್ ಪ್ರಮಾಣದಲ್ಲಿ ವಲಸಿಗರನ್ನು ಹೊಂದಿರುವ ಮತ್ತು ಇಂಧನ ಪೂರೈಕೆ ಹಾಗೂ ವಿದೇಶಿ ಹಣ ರವಾನೆಯ ಮೇಲೆ ಅವಲಂಬಿತವಾಗಿರುವ ಭಾರತಕ್ಕೆ ಈ ಬೆಳವಣಿಗೆ ಹೆಚ್ಚು ಚಿಂತೆ ತಂದೊಡ್ಡಿದೆ. ಹೀಗಾಗಿ ಭಾರತೀಯ ವಿದೇಶಾಂಗ ಸಚಿವರು ಇತ್ತೀಚೆಗೆ ತಮ್ಮ ಅಮೆರಿಕ, ಇರಾನ್ ಹಾಗೂ ಒಮನ್ ಸಹವರ್ತಿಗಳ ಜತೆ ಚರ್ಚೆ ನಡೆಸಿದ್ದಾರೆ. ಮುಂದಿನ ವಾರ ರೈಸಿನಾ ಸಂವಾದದಲ್ಲಿ ಇರಾನಿನ ವಿದೇಶಾಂಗ ಸಚಿವ ಜಾವೇದ್ ಜಾರಿಫ್ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ತನ್ನ ದೇಶದಲ್ಲಿ ರಾಜತಾಂತ್ರಿಕತೆ ಮತ್ತೆ ತಲೆಎತ್ತುವಂತೆ ಮಾಡಬೇಕಿರುವ ಕಾರಣಕ್ಕೆ ಅವರು ಈ ಮಾತುಕತೆಯನ್ನು ತಾತ್ಕಾಲಿಕವಾಗಿ ಮುಂದೂಡಬಹುದು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಎಲ್ಲಾ ಸಂಧಾನಕಾರರು ಸಾಧ್ಯವಾದ ಎಲ್ಲ ಬಗೆಯ ಪ್ರಯತ್ನಗಳಿಗೆ ಮುಂದಾಗಿದ್ದಾರೆ. ಆದರೆ ಒಮ್ಮೊಮ್ಮೆ ಸರ್ಕಾರೇತರ ವ್ಯಕ್ತಿ ಅಥವಾ ಸಂಘಟನೆಗಳು ದಾಳಿಗೆ ಪ್ರಚೋದನೆ ನೀಡಿ ಬಿಡಬಹುದು.
ಲೇಖಕ: ಅನಿಲ್ ತ್ರಿಗುಣ್ಯತ್
(ಲೇಖಕ ಅನಿಲ್ ತ್ರಿಗುಣ್ಯತ್ ಅವರು ಜೋರ್ಡಾನ್, ಲಿಬಿಯಾ ಹಾಗೂ ಮಾಲ್ಟಾದ ಮಾಜಿ ಭಾರತೀಯ ರಾಯಭಾರಿ)