ತೆಲಂಗಾಣ: ಪತ್ನಿಯ ಬಂಧನ ಸಹಿಸಿಕೊಳ್ಳದ ಪತಿಯೊಬ್ಬ ವಸತಿ ಸಮುಚ್ಛಯದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ತಹಶೀಲ್ದಾರ್ ಆಗಿದ್ದ ಮೃತನ ಪತ್ನಿಯನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಬಂಧನದ ಬಗ್ಗೆ ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಪತ್ನಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದ್ದರಿಂದ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದರು. ಮಹಡಿಯಿಂದ ಹಾರಿಬಿದ್ದ ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗೆ 40 ವರ್ಷ ಅಸುಪಾಸು ವಯಸ್ಸಾಗಿದ್ದು, ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ತಹಶೀಲ್ದಾರ ಆಗಿದ್ದ ಪತ್ನಿಯ ಬಳಿ ಭ್ರಷ್ಟಾಚಾರದಿಂದ ಸಂಪಾದಿಸಿದ 30 ಲಕ್ಷ ರೂ. ಮೊತ್ತದ ನಗದು ಮತ್ತು ಚಿನ್ನಾಭರಣಗಳು ದೊರಕಿದ ಆರೋಪದ ಮೇಲೆ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆಕೆಯನ್ನು ಬಂಧಿಸಿತ್ತು.